ಮಂಗಳೂರು : ಬ್ಯಾಂಕ್ ಅಧಿಕಾರಿಯಿಂದ ಬಹುಮುಖಿ ಸಾಧನೆ
ಮಂಗಳೂರು, ಮಾ.28: ಪ್ರಸಕ್ತ ಕಾರ್ಪೊರೇಶನ್ ಬ್ಯಾಂಕಿನ ಮಂಗಳೂರು ಕೇಂದ್ರ ಕಚೇರಿಯಲ್ಲಿ ಉಪ ಮಹಾ ಪ್ರಬಂಧಕರಾಗಿ(ಸ್ವತಂತ್ರ ವಿಭಾಗ)ನಿರ್ವಹಿಸುತ್ತಿರುವ ಡಾ.ಜಯಂತಿ ಪ್ರಸಾದ್ ನೌತಿಯಾಲ್ ತಮ್ಮ ಬಹುಮಖ ಸಾಧನೆಯಿಂದ ಮತ್ತು ಪ್ರತಿಭೆಯಿಂದ ಹಿಮಾಲಯ ಆ್ಯಂಡ್ ಹಿಂದುಸ್ಥಾನ್ ಫೌಂಡೇಶನ್‌ನ ವಿಶ್ವ ದಾಖಲೆ, ಲಿಮ್ಕಾ ದಾಖಲೆ ಹಾಗೂ ಭಾರತ ಸರಕಾರದ ಹಾಗೂ ಇತರ ಹಲವು ಪ್ರತಿಷ್ಠಿತ ಸಂಸ್ಥೆಗಳ ಪುರಸ್ಕಾರಗಳಿಗೆ ಪಾತ್ರರಾಗಿರುವ ಬಹುಮಖ ವ್ಯಕ್ತಿತ್ವದ ಬ್ಯಾಂಕ್ ಅಧಿಕಾರಿಯಾಗಿದ್ದಾರೆ.
ಬಹುಮುಖ ಪ್ರತಿಭೆಯ ಡಾ.ಜಯಂತಿ ಪ್ರಸಾದ್, ತಮ್ಮ 32 ವರ್ಷದ ಬ್ಯಾಂಕಿಂಗ್ ವೃತ್ತಿಯ ಸಂದರ್ಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದ 86 ಉನ್ನತ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದಲ್ಲದೆ ಬ್ಯಾಂಕ್ ಅಧಿಕಾರಿಯಾಗಿ, ವಿದ್ವಾಂಸರಾಗಿ ಹಲವು ಪ್ರಮುಖ ಸಾಧನೆಗಳನ್ನು ಮಾಡಿದ್ದಾರೆ.
ಕೇಂದ್ರ ಸರಕಾರದಿಂದ ಹಾಗೂ ಇತರ ಪ್ರತಿಷ್ಠಿತ ಸಂಸ್ಥೆಗಳಿಂದ 74 ಪ್ರಶಸ್ತಿಗಳಿಗೆ (ಮೂರು ಅಂತಾರಾಷ್ಟ್ರೀಯ 46 ರಾಷ್ಟ್ರೀಯ ಪ್ರಶಸ್ತಿ ಹಾಗೂ 25 ರಾಜ್ಯ ಪುರಸ್ಕಾರಗಳಿಗೆ )ಅವರು ಪಾತ್ರರಾಗಿದ್ದಾರೆ. ಅಲ್ಲದೆ 30 ಪುಸ್ತಗಳ ಲೇಖಕರಾಗಿ, 32 ಪುಸ್ತಕಗಳ ಸಹ ಲೇಖಕರಾಗಿ ಕಾರ್ಯನಿರ್ವಹಿಸಿದ್ದು, ಬ್ಯಾಂಕಿಂಗ್ ಕ್ಷೇತ್ರದ ನಿಯಮ ನಿಬಂಧನೆಗಳನ್ನೊಳಗೊಂಡ 93 ಪುಸ್ತಕಗಳನ್ನು ಅನುವಾದಿಸುವಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. 13 ನಿಯತಕಾಲಿಕಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿ 1,220 ಲೇಖನಗಳನ್ನು ಅವರು ಬರೆದಿದ್ದಾರೆ. 120 ಸಂಶೊಧನಾ ಪ್ರಬಂಧ ಬರೆದು ದಾಖಲೆ ನಿರ್ಮಿಸಿದ್ದಾರೆ.ಅಲ್ಲದೆ ಹಲವರಿಗೆ ಪಿಹೆಚ್‌ಡಿ, ಎಂ.ಫಿಲ್, ಎಂಬಿಎ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಿದ್ದ್ದಾರೆ.
ಉನ್ನತ ಸಮಾರಂಭ, ಯುಜಿಸಿ ಮಾನ್ಯತೆಯ ವಿಚಾರ ಸಂಕಿರಣಗಳಲ್ಲಿ 509 ದಿಕ್ಸೂಚಿ ಭಾಷಣ ಮಾಡಿರುತ್ತಾರೆ. 50ವಿವಿಧ ಕ್ಷೇತ್ರದ ವೃತ್ತಿಯನ್ನು ನಿರ್ವಹಿಸಿದ ಅನುಭವ ಹೊಂದಿರುವ ಇವರು ದಿನದ 16 ಗಂಟೆಗಳ ಕಠಿಣ ಪರಿಶ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಶ್ವ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 54 ವರ್ಷಗಳಿಂದಲೂ ವಿವಿಧ ಕ್ಷೇತ್ರದಲ್ಲಿ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಇದುವರೆಗೆ ವಿವಿಧ ವಿಶ್ವವಿದ್ಯಾನಿಲಯಗಳಿಂದ 68 ಪದವಿಗಳನ್ನು ಪಡೆದಿದ್ದಾರೆ. ಈ ಪೈಕಿ ಪಿಎಚ್‌ಡಿ, ಡಿ.ಲಿಟ್, ಎಂಬಿಎ, ಎಲ್‌ಎಲ್‌ಬಿ, ಎಂ.ಎ. ಸೇರಿದೆ ಎಂದು ಪ್ರಕಟನೆ ತಿಳಿಸಿದೆ.