ಸಮಿತಿ ವರದಿ ಸಲ್ಲಿಕೆಗೆ ಸುಪ್ರೀಂ ಆದೇಶ
ಹೊಸದಿಲ್ಲಿ, ಮಾ.28: ಮದುವೆ, ವಿಚ್ಛೇದನ, ಮುಸ್ಲಿಂ ಸಮುದಾಯ ಸೇರಿದಂತೆ ವಿವಿಧ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಇರುವ ನಂಬಿಕೆಗಳು ಮತ್ತಿತರ ಅಂಶಗಳ ಬಗ್ಗೆ ಅಧ್ಯಯನ ನಡೆಸಲು ರಚಿಸಿದ್ದ ಸಮಿತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್, ನ್ಯಾಯಮೂರ್ತಿ ಯು.ಲಲಿತ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ, ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚನೆ ನೀಡಿ, ಆರು ವಾರಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ಬಹುಪತ್ನಿತ್ವ, ಮೂರು ಬಾರಿ ತಲಾಖ್ ಹೇಳುವುದು ಹಾಗೂ ನಿಕಾಹ್ ಹಲಾಲಾದ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ, ಶಾಯಿರಾ ಬಾನು ಸಲ್ಲಿಸಿದ್ದ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೂ ನ್ಯಾಯಪೀಠ ಆದೇಶ ನೀಡಿದೆ.
ತಲಾಖ್ ಎನ್ನುವುದು ಮುಸ್ಲಿಂ ಪುರುಷ ತನ್ನ ಪತ್ನಿಗೆ ವಿಚ್ಛೇದನ ನೀಡುವ ಘೋಷಣೆಯಾಗಿದೆ.
ಇದೇ ವೇಳೆ ನ್ಯಾಯಪೀಠ ಸುಪ್ರೀಂಕೋರ್ಟ್ ರಿಜಿಸ್ಟ್ರಿಗೆ ಸೂಚನೆ ನೀಡಿ, ಇತರ ಇಂಥದ್ದೇ ಪ್ರಕರಣಗಳಲ್ಲಿ ನೀಡಿರುವ ತೀರ್ಪಿನ ದಾಖಲೆಗಳನ್ನು ಆರು ವಾರಗಳ ಒಳಗಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿತು. ಮುಸ್ಲಿಂ ವೈಯಕ್ತಿಕ ಕಾನೂನಿನ ಸೆಕ್ಷನ್ 2ರ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಶಾಯಿರಾ ಬಾನು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಈ ಸಂಬಂಧ ಕೇಂದ್ರ ಸರಕಾರದ ಅಭಿಪ್ರಾಯ ಕೇಳಿತ್ತು.