×
Ad

'ಕರಾವಳಿಯಲ್ಲಿ ಅತೀ ಹೆಚ್ಚು ಮಲೇರಿಯಾ ಪ್ರಕರಣ ಪತ್ತೆ ’

Update: 2016-03-28 23:27 IST

ಮಂಗಳೂರು, ಮಾ.28: ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಮಲೇರಿಯಾ ಪ್ರಕರಣಗಳು ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಪತ್ತೆಯಾ ಗಿದೆ. ಈ ಹಿನ್ನೆಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಸೂಕ್ತ ಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳ್ಳಬೇಕಾಗಿದೆ ಎಂದು ಮಂಗಳೂರಿನ ಹಿರಿಯ ವೈದ್ಯ ಡಾ.ಶಾಂತರಾಮ ಬಾಳಿಗ ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮನಪಾ ಸದಸ್ಯರಿಗೆ ಮಲೇರಿಯಾ ನಿಯಂತ್ರಣದ ಬಗ್ಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತ ನಾಡುತ್ತಿದ್ದರು.

ಮಲೇರಿಯಾ ನಿಯಂತ್ರಿಸಲು ನಗರದಲ್ಲಿ ಶೇ.30ರಷ್ಟು ಬಾವಿಗಳಿಗೆ ಗಪ್ಪಿ ಮೀನುಗಳನ್ನು ಹಾಕಲಾಗಿದೆ. ಈ ಮೀನುಗಳು ಸೊಳ್ಳೆಗಳು ನೀರಿನಲ್ಲಿ ಬೆಳೆಯದಂತೆ ಅವುಗಳ ಮರಿಗಳನ್ನು ತಿಂದು ಜೈವಿಕವಾಗಿ ನಿಯಂತ್ರಿಸುತ್ತವೆ. ಇದೇ ರೀತಿ 16 ಸಾವಿರ ಬಾವಿಗಳಿಗೆ ಈ ರೀತಿಯ ಗಪ್ಪಿ ಅಥವಾ ಗಂಬೂಝಿಯಾ ಮೀನು ಗಳನ್ನು ಬಿಡಬೇಕಾಗಿದೆ ಎಂದು ಡಾ. ಶಾಂತರಾಮ ಬಾಳಿಗ ತಿಳಿಸಿದರು.

ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಜೈವಿಕ ಹಾಗೂ ಕೀಟನಾಶಕ ಬಳಕೆ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮಗಳ ಅಧಿಕಾರಿ ಡಾ.ಅರುಣ್ ಕುಮಾರ್ ವಿವರಿಸಿದರು.

ಡೆಂಗ್ ಪ್ರಕರಣದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಹೆಚ್ಚು ಪರಿಣಾಮಕಾರಿ ಎಂದು ಡಾ.ಅರುಣ್ ಕುಮಾರ್ ತಿಳಿಸಿದರು.ಮಲೇರಿಯಾ ದಿಂದ ಪಾರಾಗಲು ಸೊಳ್ಳೆ ಪರದೆ ಹಾಗೂ ಜೈವಿಕ ನಿಯಂತ್ರಣಕ್ಕಾಗಿ ಗಪ್ಪಿ ಮೀನಿನ ಬಳಕೆ ಮತ್ತು ವೈಯಕ್ತಿಕವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಅರುಣ್ ಕುಮಾರ್ ವಿವರಿಸಿದರು.

ಮನಪಾ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷ ಗಳಲ್ಲಿ ಮಲೇರಿಯಾ ಪ್ರಕರಣಗಳು ಇಳಿಮುಖ ವಾಗಿದೆ. 2014ರಲ್ಲಿ 10,864 ಪ್ರಕರಣಗಳು ಪತ್ತೆ ಯಾಗಿದ್ದು, 2015ರಲ್ಲಿ 2,730ಕ್ಕೆ ಇಳಿಕೆಯಾಗಿದೆ ಎಂದು ಮನಪಾ ಪರಿಸರ ವಿಭಾಗದ ಇಂಜಿನಿಯರ್ ಮನುಕುಮಾರ್ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಮನಪಾ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕವಿತಾ ಸನಿಲ್, ವಿಪಕ್ಷ ಅಧ್ಯಕ್ಷೆ ರೂಪಾ ಡಿ. ಬಂಗೇರ, ತೆರಿಗೆ, ಹಣಕಾಸು ಸ್ಥಾಯಿ ಸಮಿತಿ ಸದಸ್ಯೆ ಅಪ್ಪಿ, ಮನಪಾ ಆಯುಕ್ತ ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಕಂಡುಬರುವ ಮಲೇರಿಯಾ ಪ್ರಕರಣಗಳ ಪೈಕಿ ಶೇ.80 ಪ್ರಕರಣಗಳು ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕಂಡು ಬರುತ್ತಿವೆ. ಜೂನ್‌ನಿಂದ ಆಗಸ್ಟ್‌ವರೆಗೆ ಸುರಿಯುವ ಮಳೆ ಹಾಗೂ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿ ಇದಕ್ಕೆ ಮುಖ್ಯ ಕಾರಣವಾಗಿದೆ. ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗುತ್ತದೆ. ಬಾವಿಗಳಲ್ಲಿ ಸೊಳ್ಳೆಮರಿಗಳು ಹುಟ್ಟುವುದು ಮಲೇರಿಯಾ ಹರಡಲು ಪ್ರಮುಖ ಕಾರಣ.
                               -ಡಾ.ಶಾಂತರಾಮ ಬಾಳಿಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News