ಎ.6ರಂದು ಉಡುಪಿಗೆ ಮುಖ್ಯಮಂತ್ರಿ ಭೇಟಿ
ಉಡುಪಿ, ಮಾ.28: ಮುಖ್ಯಮಂತ್ರಿ ಸಿದ್ದರಾಮಯ್ಯ ಎ.6ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದು, ಈ ಸಂಬಂಧ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಅಧ್ಯಕ್ಷತೆಯಲ್ಲಿ ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಎ.6ರಂದು ಕುಂದಾಪುರದ ಯುವ ಮೆರಿಡಿಯನ್ ಬಳಿ ಹೆಲಿಪ್ಯಾಡ್‌ಗೆ ಮುಖ್ಯಮಂತ್ರಿ ಆಗಮಿಸಲಿದ್ದು, ನಂತರ ಕುಂದಾಪುರದಲ್ಲಿ ನಡೆಯುವ ರಾಜ್ಯ ಸರಕಾರಿ ನೌಕರರ ವಿಭಾಗೀಯ ಸಮ್ಮೇಳನದಲ್ಲಿ ಭಾಗವಹಿಸುವರು. ಬಳಿಕ ಗಂಗೊಳ್ಳಿ ಮತ್ತು ಬೈಂದೂರು ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಭೇಟಿ ವೇಳೆ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಿ, ಪಟ್ಟಿಯನ್ನು ಕುಂದಾಪುರ ತಹಶೀಲ್ದಾರ್‌ಗೆ ಸಲ್ಲಿಸುವಂತೆ ಹಾಗೂ ಈ ಕುರಿತು ಕುಂದಾಪುರ ಎಸಿ ಮತ್ತು ತಹಶೀಲ್ದಾರ್ ಉಸ್ತುವಾರಿ ವಹಿಸುವಂತೆ ಸೂಚಿಸಿದರು.
ಮುಖ್ಯಮಂತ್ರಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಿದ ಬಳಿಕ ಮಣಿಪಾಲದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಈ ಕುರಿತು ಎಲ್ಲ ಇಲಾಖೆಗಳು ತಮ್ಮ ಸಾಧನೆ ಕುರಿತ ಮಾಹಿತಿಗಳನ್ನು ಸಿದ್ಧಪಡಿಸಿ ನೀಡುವಂತೆ ಸೂಚಿಸಿದರು. ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ವಿದ್ಯುತ್ ಅಡಚಣೆಯಾಗ ದಂತೆ ಕ್ರಮ ವಹಿಸುವಂತೆ ಹಾಗೂ ವಿದ್ಯುತ್ ಕಡಿತವಾದರೆ ಅಗತ್ಯ ಪರ್ಯಾಯ ವ್ಯವಸ್ಥೆಯನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ, ಕಾರ್ಯಕ್ರಮ ದಲ್ಲಿ ಭಾಗವಹಿಸುವ ಜನರಿಗೆ ಕುಡಿಯುವ ನೀರು ಮತ್ತು ಲಘು ಉಪಾಹಾರ ವ್ಯವಸ್ಥೆ ಮಾಡುವಂತೆ ಹಾಗೂ ಕಾರ್ಯಕ್ರಮದ ನಂತರ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವಂತೆ ನಗರಸಭೆ ಮತ್ತು ಪುರಸಭೆ ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಎಸ್ಪಿ ಕೆ.ಅಣ್ಣಾಮಲೈ, ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುಂದಾಪುರ ಉಪ ವಿಭಾಗಾಧಿಕಾರಿ ಅಶ್ವಥಿ, ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಮತ್ತು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.