ನಾಳೆ ಮಂಗಳೂರು ವಿವಿ 34ನೆ ಘಟಿಕೋತ್ಸವ
ಮಂಗಳೂರು, ಮಾ.28: ಮಂಗಳೂರು ವಿಶ್ವವಿದ್ಯಾನಿಲಯದ 34ನೆ ವಾರ್ಷಿಕ ಘಟಿಕೋತ್ಸವವು ಮಾ.30ರಂದು ಬೆಳಗ್ಗೆ 10ಕ್ಕೆ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ಭಾರತ ಸರಕಾರದ ನೀತಿ ಆಯೋಗದ ಸದಸ್ಯ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ರಕ್ಷಣೆ) ಇದರ ಮಾಜಿ ಮಹಾನಿರ್ದೇಶಕ ವಿ.ಕೆ.ಸಾರಸ್ವತ್ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ಹಾಗೂ ವಿವಿ ಕುಲಾಧಿಪತಿ ವಜುಭಾಯಿ ರೂಡಾಭಾಯಿ ವಾಲಾ ಪದವಿ ಪ್ರದಾನ ಮಾಡುವರು. ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಹಾಗೂ ವಿವಿಯ ಸಹಕುಲಾಧಿಪತಿಗಳು ಉಪಸ್ಥಿತರಿರುವರು.
ಫಟಿಕೋತ್ಸವದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್, 55 ಮಂದಿಗೆ ಡಾಕ್ಟರೇಟ್ ಪದವಿ, 39 ಮಂದಿಗೆ ಚಿನ್ನದ ಪದಕ ಮತ್ತು 72 ಮಂದಿಗೆ ನಗದು ಬಹುಮಾನ ನೀಡಲಾಗುವುದು. 240 ಒಟ್ಟು ರ್ಯಾಂಕ್‌ಗಳಲ್ಲಿ ಪ್ರಥಮ ರಾಂಕ್ ಪಡೆದ 59 ಮಂದಿಗೆ ರ್ಯಾಂಕ್ ಪ್ರಮಾಣ ಪತ್ರ ನೀಡಲಾಗುವುದು.
ಮಂಗಳೂರು ವಿಶ್ವವಿದ್ಯಾನಿಲಯ 2014-15ನೆ ಸಾಲಿನಲ್ಲಿ ನಡೆಸಿದ ವಿವಿಧ ಪರೀಕ್ಷೆಗಳಿಗೆ ಒಟ್ಟು 45,458 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 27,195 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 4,818 ಮಂದಿ ಸ್ನಾತಕೋತ್ತರ ಪದವಿ, 22,319 ಮಂದಿ ಪದವಿ ಹಾಗೂ 3 ಮಂದಿ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.