ಜೂನ್‌ನೊಳಗೆ ವಿಸ್ತೃತ ಯೋಜನಾ ವರದಿ ನೀಡಿದರೆ ಶಿರಾಡಿ ಘಾಟಿ ಸುರಂಗ 2 ವರ್ಷಗಳಲ್ಲಿ ಪೂರ್ಣ: ಸಚಿವ ಗಡ್ಕರಿ
ಮಂಗಳೂರು, ಮಾ.28: ಬಹುನಿರೀಕ್ಷೆಯ ಹಾಗೂ ಬಹುಪಯೋಗಿ 23.6 ಕಿ.ಮೀ. ಶಿರಾಡಿ ಸುರಂಗ ಮಾರ್ಗದ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಜೂನ್‌ನೊಳಗೆ ನೀಡಿದ್ದೇ ಆದಲ್ಲಿ, ಡಿಸೆಂಬರ್‌ನೊಳಗೆ ಕೆಲಸ ಆರಂಭಿಸಿ, 2 ವರ್ಷಗಳಲ್ಲಿ ಪೂರ್ಣ ಗೊಳಿಸಲಾಗುವುದು ಎಂದು ಕೇಂದ್ರ ಕೇಂದ್ರದ ಹಡಗು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಾಗ್ದಾನ ಮಾಡಿದ್ದಾರೆ. ಪಣಂಬೂರಿನ ಜವಾಹರ್ ಲಾಲ್ ನೆಹರೂ ಶತಮಾನೋತ್ಸವ ಭವನದಲ್ಲಿ ಇಂದು ವಿವಿಧ ಕಾಮಗಾರಿಗಳಿಗೆ ಶಿಲಾ ನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕದ ಚೀಫ್ ಇಂಜಿನಿಯರ್ ಡಿಪಿಆರ್ ಸಿದ್ಧಪಡಿಸುತ್ತಿದ್ದು, ಅದನ್ನು ಜೂನ್‌ನೊ ಳಗೆ ಸಲ್ಲಿಸುವುದಾಗಿ ರಾಜ್ಯ ಸಚಿವರು ಈಗಾಗಲೇ ತಿಳಿಸಿದ್ದಾರೆ ಎಂದರು.
6 ಸುರಂಗಗಳು ಹಾಗೂ 7 ಸೇತುವೆ ಗಳನ್ನು ಈ ಸುರಂಗ ಮಾರ್ಗ ಒಳಗೊಂಡಿರುತ್ತವೆ. ಅದರಲ್ಲಿ ಅತೀ ಉದ್ದದ ಅಂದರೆ 2.9 ಕಿ.ಮೀ. ಸುರಂಗ ಹಾಗೂ ಪ್ರಮುಖ ಸೇತುವೆಗಳಲ್ಲಿ 1.5 ಕಿ.ಮೀ. ಉದ್ದದ ಸೇತುವೆ ಸೇರಿದ್ದು, ಅದು ಬೆಂಗಳೂರಿನಿಂದ ಹಾಸನಕ್ಕೆ ನೇರ ಸಂಪರ್ಕ ಕಲ್ಪಿಸುವುದಾಗಿದೆ. ಇದು ಮಂಗಳೂರು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಜೂನ್ ನೊಳಗೆ ಡಿಪಿಆರ್ ದೊರೆತಲ್ಲಿ, ನವೆಂಬರ್ ಅಥವಾ ಡಿಸೆಂಬರ್‌ನೊ ಳಗೆ ಕೆಲಸ ಆರಂಭಿಸಿ 2 ವರ್ಷಗಳಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸು ವುದಾಗಿ ಅವರು ವಾಗ್ದಾನ ನೀಡಿದರು.
‘ಸಾಗರ್ ಮಾಲ ಯೋಜನೆ’ಯಡಿ ಮೀನುಗಾರರಿಗೆ ಉತ್ತೇಜನ
ಪ್ರಸ್ತುತ ಸಮುದ್ರದಲ್ಲಿ 12 ನಾಟಿಕಲ್ ದೂರದವರೆಗೆ ಮೀನುಗಾರಿಕೆಗೆ ರಾಜ್ಯ ಸರಕಾರ ಹಾಗೂ ಅದಕ್ಕಿಂತ ದೂರಕ್ಕೆ ಕೇಂದ್ರ ಸರಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ನೈಜ ಮೀನುಗಾರರಿಗೆ ಸಾಗರ ಮಾಲ ಯೋಜನೆಯಡಿ ಟ್ರಾಲರ್ ಗಳನ್ನು ಖರೀದಿಸಲು ಸಬ್ಸಿಡಿ ಯನ್ನು ಸರಕಾರ ಒದಗಿಸಲಿದೆ. ಅದಕ್ಕಾಗಿ ಮೀನುಗಾರರ 10 ಜನರ ಗುಂಪು ತಲಾ 25,000 ರೂ.ನಂತೆ 2,50,000 ರೂ. ಒಟ್ಟುಗೂಡಿಸಿದರೆ ಅವರಿಗೆ 15 ಲಕ್ಷ ರೂ. ಸಬ್ಸಿಡಿಯೊಂದಿಗೆ ಬ್ಯಾಂಕ್ ಸೌಲಭ್ಯದಲ್ಲಿ 1 ಕೋ.ರೂ. ವೌಲ್ಯದ ಟ್ರಾಲರ್ ಖರೀದಿಸಲು ನೆರವು ನೀಡ ಲಾಗುವುದು. ಈ ಮೂಲಕ ಮೀನು ಗಾರರು 12 ನಾಟಿಕಲ್‌ಗಿಂತ ಹೆಚ್ಚಿನ ದೂರದಲ್ಲಿ ಮೀನುಗಾರಿಕೆ ಮಾಡ ಬಹುದಾಗಿದೆ. ಇದರಿಂದ ಮೀನು ಉತ್ಪನ್ನ ಹೆಚ್ಚಾಗಲಿದೆ ಎಂದು ಸಚಿವ ಗಡ್ಕರಿ ತಿಳಿಸಿದರು.
755 ಕೋ.ರೂ. ವೆಚ್ಚದಲ್ಲಿ 3 ರಸ್ತೆಗಳು ರಾ.ಹೆ.ಯಾಗಿ ಘೋಷಣೆ
ದ.ಕ. ಜಿಲ್ಲೆಯ 3 ಪ್ರಮುಖ ರಸ್ತೆಗಳನ್ನು ನೂತನ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಬೇಕು ಎಂಬ ಸಂಸದ ನಳಿನ್ ಕುಮಾರ್ ಕಟೀಲ್‌ರ ಮನವಿಗೆ ಪೂರಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಸ್ಥಳದಲ್ಲೇ ಆ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಿದರು. ಮಾತ್ರವಲ್ಲದೆ ಹೊಸದಿಲ್ಲಿಗೆ ಬರುವ ವೇಳೆ ಈ ಕುರಿತಾದ ಅಧಿಕೃತ ಪತ್ರವನ್ನು ನೀಡುವುದಾಗಿ ತಿಳಿಸಿದರು. ಕಾರ್ಕಳ- ಮೂಡುಬಿದಿರೆ- ಬಿ.ಸಿ.ರೋಡ್‌ನ 44 ಕಿ.ಮೀ. ಉದ್ದದ ರಸ್ತೆ 220 ಕೋ.ರೂ.ಗಳಲ್ಲಿ, ಬಿ.ಸಿ.ರೋಡ್-ಕೈಕಂಬ-ಕಟೀಲು-ಮುಲ್ಕಿಯ 51 ಕಿ.ಮೀ. ಉದ್ದದ ರಸ್ತೆ 255 ಕೋ.ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿದೆ. ಅದೇರೀತಿ ತೊಕ್ಕೊಟ್ಟು-ಮುಡಿಪು- ಮೆಲ್ಕಾರ್‌ನ 28 ಕಿ.ಮೀ. ಉದ್ದದ ರಸ್ತೆ 280 ಕೋ.ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಪರಿವರ್ತನೆಗೊಳ್ಳಲಿದೆ. ಈ ಮೂರು ರಸ್ತೆಗಳು ಒಟ್ಟು 755 ಕೋ.ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.
ಶಿಲಾನ್ಯಾಸ- ಉದ್ಘಾಟನೆಗೊಂಡ ಕಾಮಗಾರಿಗಳು
ಕಾರ್ಯಕ್ರಮದಲ್ಲಿ ಹಾಸನ- ಮಾರನ ಹಳ್ಳಿ ವಿಭಾಗದ ರಾಷ್ಟ್ರೀಯ ಹೆದ್ದಾರಿ 75ನ್ನು ಚತುಷ್ಪಥ ರಸ್ತೆಯನ್ನಾಗಿ ವಿಸ್ತರಣೆ, ಗುಂಡ್ಯ ಬಳಿ ಅಡ್ಡಹೊಳೆ- ಬಂಟ್ವಾಳ ಕ್ರಾಸ್ ವಿಭಾಗದ ರಾಷ್ಟ್ರೀಯ ಹೆದ್ದಾರಿ 75ನ್ನು ಚತುಷ್ಪಥ ರಸ್ತೆಯನ್ನಾಗಿ ವಿಸ್ತರಣೆ ಹಾಗೂ ರಾಷ್ಟ್ರೀಯ ಹೆದ್ದಾರಿ 75ರ 216 ಕಿ.ಮೀ.ನಿಂದ 237 ಕಿ.ಮೀ.ವರೆಗಿನ ರಸ್ತೆಯನ್ನು ಬಲವೃದ್ದಿಗೊಳಿಸುವುದು ಹಾಗೂ 250.620 ಕಿ.ಮೀ.ನಿಂದ 263 ಕಿ.ಮಿ. (ಶಿರಾಡಿ ಘಾಟ್)ವರೆಗೆ ಬೆಂಗಳೂರು- ಮಂಗಳೂರು ವಿಭಾ ಗದ ರಸ್ತೆಯ ಕಾಂಕ್ರಿಟ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿತು. ರಾ.ಹೆದ್ದಾರಿ 66ರ ಬೈಕಂಪಾಡಿ ಸೇತುವೆ ಹಾಗೂ ಬಂಟ್ವಾಳ ಕ್ರಾಸ್ ಬಳಿಯ ರಾ.ಹೆ.75ರ ಸೇತುವೆ ಉದ್ಘಾಟನೆ ಮತ್ತು ಶಿರಾಡಿ ಘಾಟ್‌ನ 237ಕಿ.ಮೀ.ನಿಂದ 250.620 ಕಿ.ಮೀ. ರಾ.ಹೆ. ವಿಸ್ತರಣೆ ಹಾಗೂ ಕಾಂಕ್ರಿಟ್ ಕಾಮಗಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದರು.