×
Ad

ನಾಯಿ ಬೊಗಳಿದ್ದಕ್ಕೆ ಜಗಳ, ಯುವಕನ ಕೊಲೆಯಲ್ಲಿ ಅಂತ್ಯ

Update: 2016-03-29 11:08 IST

ಬೆಂಗಳೂರು : ನಗರದ ಜೆಸಿ ನಗರ ಪ್ರದೇಶದಲ್ಲಿ ರವಿವಾರ ರಾತ್ರಿ ನಡೆದ ಭಾರತ-ಆಸ್ಟ್ರೇಲಿಯಾ ಟಿ-20 ಪಂದ್ಯದ ಸಾರ್ವಜನಿಕ ವೀಕ್ಷಣೆಯನ್ನು ಆಯೋಜಿಸಿದ್ದ ಕುಟುಂಬ ಆ ರಾತ್ರಿ ನಾಯಿ ಬೊಗಳಿದ ವಿಚಾರದಲ್ಲುಂಟಾದ ಜಗಳ ಕೊಲೆಯಲ್ಲಿ ಪರ್ಯವಸಾನವಾಗಿ ತನ್ನ ಯುವ ಸದಸ್ಯನನ್ನು ಕಳೆದುಕೊಂಡು ದು:ಖದ ಮಡುವಿನಲ್ಲಿ ಮುಳುಗುವಂತಾಗಿದೆ. ಕೊಲೆಗೀಡಾದ ಯುವಕನನ್ನು 23 ವರ್ಷದ ಅವಿನಾಶ್ ಜೊನಾಥನ್ ಎಂದು ಗುರುತಿಸಲಾಗಿದೆ.

ಆತ ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಯಾಗಿದ್ದು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವಿನಾಶ್ ಸೋಮವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.ಆ ದಿನ ರಾತ್ರಿ ಅವಿನಾಶ್ ಕುಟುಂಬ ಹಾಗೂ ನೆರೆಹೊರೆಯವರು ಮ್ಯಾಚ್ ನೋಡುವುದರಲ್ಲಿ ತಲ್ಲೀನರಾಗಿದ್ದಾಗ ಅದೇ ಪ್ರದೇಶದ ನಿವಾಸಿ ಜಾನ್ ಕೆನ್ನಡಿ (24) ಅಲ್ಲಿಗೆ ತನ್ನ ಲಾಬ್ರಡೋರ್ ನಾಯಿಯೊಂದಿಗೆ ಆಗಮಿಸಿದ್ದು ಆ ನಾಯಿ ಸತತವಾಗಿ ಬೊಗಳಲು ಆರಂಭಿಸಿ ಕ್ರಿಕೆಟ್ ಪ್ರೇಮಿಗಳಿಗೆ ತೊಂದರೆಯುಂಟು ಮಾಡಿದಾಗ ಅವಿನಾಶ್ ಅದನ್ನು ವಿರೋಧಿಸಿದ್ದಾಗಿ ತಿಳಿದು ಬಂದಿದೆ.

ಆಗ ಅವಿನಾಶ್ ಹಾಗೂ ಜಾನ್ ನಡುವೆ ಜಗಳವಾಗಿ ಅವಿನಾಶ್ ಜಾನ್ ಕೆನ್ನೆಗೆ ಹೊಡೆದಿದ್ದನೆನ್ನಲಾಗಿದೆ. ಆಗ ಜಾನ್ ತನ್ನ ನಾಯಿಯೊಂದಿಗೆ ಹಿಂದಿರುಗಿದನಾದರೂ ಮತ್ತೆ ಯುವಕರ ಗುಂಪಿನೊಂದಿಗೆ ಆಗಮಿಸಿ, ಅವಿನಾಶ್ ಮತ್ತಿತರರನು ಅಲ್ಲಿಂದ ಓಡಿಸಿದ್ದೆನೆಂದು ಆರೋಪಿಸಲಾಗಿದೆ.ಆಗ ಅಲ್ಲಿಗೆ ಆಟೋ ಒಂದರಲ್ಲಿ ಆಗಮಿಸಿದ ಮೂವರು ಅವಿನಾಶ್‌ಗೆ ಚೂರಿಯಿಂದ ಇರಿದಿದ್ದು,ಆತನ ಇಬ್ಬರು ಸಂಬಂಧಿಗಳು ಕೆನ್ನತ್ ಹಾಗೂ ಡೇವಿಡ್ ಅವರನ್ನು ತಡೆಯಲು ಯತ್ನಿಸಿದರೂ ಅವರ ಮೇಲೂ ಹಲ್ಲೆಗೈಯ್ಯಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವಿನಾಶ್ ಮರುದಿನ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಪೊಲೀಸರು ಜಾನ್ ಕೆನ್ನಡಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News