×
Ad

ರಾಜ್ಯ ಸರಕಾರದ ಮರಳು ನೀತಿ ವಿರುದ್ಧ ಬಿಜೆಪಿ ಪ್ರತಿಭಟನೆ

Update: 2016-03-29 11:50 IST

ಮಂಗಳೂರು, ಮಾ. 29: ರಾಜ್ಯ ಸರಕಾರದ ಮರಳು ನೀತಿಯಿಂದಾಗಿ ಮಂಗಳೂರು ನಗರದಲ್ಲಿ ಕೃತಕ ಮರಳಿನ ಅಭಾವ ಸೃಷ್ಟಿಯಾಗಿದೆ ಎಂದು ಆರೋಪಿಸಿ ಬಿಜೆಪಿಯ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಪ್ರತಿಭಟನೆ ನಡೆಯಿತು.


ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಷೇತ್ರದ ಅಧ್ಯಕ್ಷ ರವಿಶಂಕರ್ ಮಿಜಾರ್, ದ.ಕ. ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದಾಗಿ ಕೃತಕ ಮರಳಿನ ಅಭಾವ ಸೃಷ್ಟಿಯಾಗಿದೆ ಎಂದು ದೂರಿದರು.


ಇದರಿಂದಾಗಿ ಮನೆ ಕಟ್ಟಲು ಮುಂದಾಗಿರುವ ಬಡವರು, ಕೂಲಿ ಕಾರ್ಮಿಕರು ಪರದಾಡುವಂತಾಗಿದೆ. ಬಿಲ್ಡರ್‌ಗಳಿಗೂ ಮರಳು ದೊರೆಯದೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡು ಅದನ್ನೇ ನಂಬಿಕೊಂಡಿರುವ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ ಎಂದು ಅವರು ಹಳಿದರು.


ಜಿಲ್ಲಾಡಳಿತದಿಂದ ಮರಳುಗಾರಿಕೆಗೆ ಪ್ರಸ್ತುತ 11 ಜನರಿಗೆ ಟೆಂಡರ್ ಒದಗಿಸಲಾಗಿದೆ. ಆದರೆ ಅವರಿಗೆ ಮರಳು ದಿಣ್ಣೆಯಿಂದ ಸ್ಟಾಕ್‌ಯಾರ್ಡ್‌ಗೆ ಮರಳು ಹಾಕಲು ಮಾತ್ರ ಅವಕಾಶವಿದೆ. ಪ್ರಸ್ತುತ ಬಿಸಿರೋಡ್‌ನಲ್ಲಿ ಮರಳು ಸ್ಟಾಕ್‌ಯಾರ್ಡ್ ಇದ್ದು, ಅಲ್ಲಿ 4000 ರೂ. ಬೆಲೆಗೆ ಸಿಗುವ ಮರಳು ಅಲ್ಲಿಂದ ಮಂಗಳೂರಿಗೆ ತರಲು ವಾಹನ ಬಾಡಿಗೆ ಸೇರಿ ಒಂದು ಲಾರಿಗೆ ಏಳೆಂಟು ಸಾವಿರ ರೂ. ವ್ಯಯಿಸಬೇಕಾಗುತ್ತದೆ. ಒಂದು ಲೋಡ್ ಮರಳನ್ನು ಖರೀದಿಸಬೇಕಾದರೆ ಮನೆಕಟ್ಟುವ ಬಡಪಾಯಿ ಸುಮಾರು 10,000 ರೂ.ಗಳನ್ನು ತೆರಬೇಕಾಗುತ್ತದೆ. ನೈಸರ್ಗಿಕವಾಗಿ ನಮ್ಮಲ್ಲೇ ದೊರೆಯುವ ಮರಳಿಗೆ ಇಷ್ಟೊಂದು ಬೆಲೆಯಾಗಿರುವುದು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಜನವಿರೋಧಿ ಮರಳು ನೀತಿಯಿಂದ ಎಂದು ಅವರು ಆಪಾದಿಸಿದರು.


ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಕಾಂಗ್ರೆಸ್‌ನ ಕಾರ್ಯಕರ್ತರು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆಪಾದಿಸಿದರು.


ಮರಳಿಲ್ಲದೆ ಮನಪಾ ವ್ಯಾಪ್ತಿಯಲ್ಲಿ ಸರಕಾರಿ ನಿರ್ಮಾಣ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಮರಳು ನೀತಿಯನ್ನು ಸರಿಪಡಿಸಿ ಸರಳೀಕರಿಸದಿದ್ದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.


ಪ್ರತಿಭಟನೆಯಲ್ಲಿ ಮನಪಾ ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ, ಸತೀಶ್ ಪ್ರಭು, ವಿಜಯ ಕುಮಾರ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News