ಪುತ್ತೂರು : ಪುರುಷ ಮತ್ತು ಮಹಿಳೆಯ ಸಮಾನ ಚಿಂತನೆಯಿಂದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಸಾಧ್ಯ- ರೇಖಾ ಜೆ.ಶೆಟ್ಟಿ
ಪುತ್ತೂರು: ಮಹಿಳೆ ಮತ್ತು ಪುರುಷರು ಸಮಾನತೆ ಮೂಡಿದಾಗ ಮಾತ್ರ ಸಮಾಜದಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದು ಪುತ್ತೂರು ನಗರ ಸಭಾ ಪೌರಾಯುಕ್ತೆ ರೇಖಾ ಜೆ.ಶೆಟ್ಟಿ ಹೇಳಿದರು.
ಅವರು ಮಂಗಳವಾರ ಪುತ್ತೂರಿನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಇದರ ಜಂಟೀ ಆಶ್ರಯದಲ್ಲಿ ನಡೆದ ಗ್ರಾಮ ಪಂಚಾಯತ್ ಮಟ್ಟದ ಮಹಿಳೆಯರ ಮತ್ತು ಮಕ್ಕಳ ಮಾರಾಟ ಹಾಗೂ ಸಾಗಾಟ ತಡೆ ಕಾವಲು ಸಮಿತಿ ಸದಸ್ಯರ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾನ ಚಿಂತನೆಯ ಕೊರತೆಯಿಂದಾಗಿ ಮಹಿಳೆಯರು ಸಾಮಾಜಿಕವಾಗಿ ಇನ್ನೂ ಮುಂದೆ ಬರಲು ಸಾಧ್ಯವಾಗಿಲ್ಲ ಎಂದ ಅವರು ಮನೆಕೆಲಸ ಹಾಗೂ ನೌಕರಿಯನ್ನು ಮಾಡುತ್ತಿರುವ ಮಹಿಳೆಯ ಶ್ರಮಕ್ಕೆ ಸರಿಯಾದ ಬಲ ಮತ್ತು ಬೆಲೆ ಸಿಗುತ್ತಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿ ಮಹಿಳೆಯರು ಮುಂದೆ ಬರಬೇಕು ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಗಾಟ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇದನ್ನು ತಪ್ಪಿಸಲು ಕಾವಲು ಸಮಿತಿಗಳಿಗೆ ಈ ಬಗ್ಗೆ ಸರಿಯಾದ ಅರಿವು ಮತ್ತು ಕ್ರಿಯಾಶೀಲತೆ ಬೆಳೆಯಬೇಕು. ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಅರಿವನ್ನು ಪಡೆದು ಮಹಿಳೆಯರ ಮತ್ತು ಮಕ್ಕಳ ಮಾರಾಟ ಹಾಗೂ ಸಾಗಾಟವನ್ನು ತಡೆಯಲು ಸಾಧ್ಯ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಂದರ ಪೂಜಾರಿ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಕಾವಲು ಸಮಿತಿಗೆ ಮಹಿಳೆಯರ ಮತ್ತು ಮಕ್ಕಳ ಮಾರಾಟ ಹಾಗೂ ಸಾಗಾಟವನ್ನು ತಡೆಯವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿಗಳಿವೆ. ಈ ಬಗ್ಗೆ ಸಾಕಷ್ಟು ಕಾನೂನುಗಳಿದ್ದರೂ ಮಾಹಿತಿಯ ಕೊರತೆಯಿಂದಾಗಿ ಸಾಕಷ್ಟು ಪ್ರಕರಣಗಳು ನಡೆಯುತ್ತಿದೆ. ಶಿಬಿರದಲ್ಲಿ ಮಾಹಿತಿ ಪಡೆದುಕೊಂಡ ಕಾವಲು ಸಮಿತಿ ಸದಸ್ಯರು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಉಸ್ಮಾನ್ ಅವರು ಮಾತನಾಡಿ ಮಹಿಳೆಯರ ಮತ್ತು ಮಕ್ಕಳ ಮಾರಾಟ ಮತ್ತು ಸಾಗಾಟವನ್ನು ತಡೆಯುವ ನಿಟ್ಟಿನಲ್ಲಿ ಇಲಾಖೆ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ನಮಗೆ ಸರಿಯಾದ ವರದಿ ಬಾರದಿರುವ ಕಾರಣ ಎಲ್ಲಾ ಪ್ರಕರಣಗಳನ್ನು ಗುರುತಿಸಿ ಪರಿಹರಿಸುವಲ್ಲಿ ತೊಡಕಾಗುತ್ತಿದೆ. ಪಂಚಾಯತ್ ಮೂಲಕ ಆಯ್ಕೆಯಾಗಿರುವ ಸಮಿತಿಯು ಈ ಬಗ್ಗೆ ಪ್ರಕರಣ ನಡೆದಾಗ ಹೆಚ್ಚಿನ ಕಾಳಜಿ ವಹಿಸಿ ಇಲಾಖೆಗೆ ಮಾಹಿತಿ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂದರು. ಪುತ್ತೂರು ತಾಲೂಕು ಪಂಚಾಯತ್ ವಿಸ್ತರಣಾಧಿಕಾರಿ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಪತ್ರಕರ್ತ ಸಂಶುದ್ಧೀನ್ ಸಂಪ್ಯ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಕಸ್ತೂರಿ ಬೊಳುವಾರು ಮತ್ತು ನ್ಯಾಯವಾದಿ ಮನೋಹರ ಕೆ.ವಿ. ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾ.ಪಂ ಸದಸ್ಯೆ ಹಾಗೂ ಪುತ್ತೂರು ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಜಯಂತಿ ಆರ್. ಗೌಡ, ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗಡೆ ಸ್ವಾಗತಿಸಿರು. ಅಂಗನವಾಡಿ ಮೇಲ್ವಿಚಾರಕಿಯರಾದ ಸರೋಜಿನಿ ವಂದಿಸಿದರು. ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.