ಸುಳ್ಯ: ನಗರ ಪಂಚಾಯತ್ ಒಂದನೇ ವಾರ್ಡಿಗೆ ಉಪ ಚುನಾವಣೆ ಘೋಷಣೆ
ಸುಳ್ಯ: ಸುಳ್ಯ ನಗರ ಪಂಚಾಯತ್‌ನ 1ನೇ ವಾರ್ಡ್ ಸದಸ್ಯರಾಗಿದ್ದ ಚಂದ್ರಕುಮಾರ್‌ರವರು ನಿಧನರಾಗಿ ಸದಸ್ಯತ್ವ ತೆರವಾದ ಹಿನ್ನೆಲೆಯಲ್ಲಿ ಆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಎ.17ರಂದು ಚುನಾವಣೆ ನಡೆಯಲಿದೆ.
ಮಾ.30ರಂದು ಉಪಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಸಲು ಎ.6 ಕೊನೆಯ ದಿನವಾಗಿದೆ. ಎ.7ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಎ.9ರಂದು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಎ.17ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಎ.20ರಂದು ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯ ಗಳಿಸಿದ್ದ ಚಂದ್ರಕುಮಾರ್ ಅಸೌಖ್ಯದಿಂದ ನಿಧನ ಹೊಂದಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯುವವರೆಂದು ಕುತೂಹಲ ಉಂಟಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಮಾಜಿ ನ.ಪಂ. ಸದಸ್ಯ ದಿನೇಶ್ ಅಂಬೆಕಲ್ಲು, ಮಂಜುನಾಥ ಕಂದಡ್ಕ, ಶಿವ ಕಂದಡ್ಕ, ಭಾಸ್ಕರ ಪೂಜಾರಿ ಮತ್ತಿತರರ ಹೆಸರು ಕೇಳಿ ಬರುತ್ತಿದೆ. ಬಿಜೆಪಿಯಿಂದ ಕಳೆದ ಪರಾಭವಗೊಂಡಿದ್ದ ವಿನಯಕುಮಾರ್ ಕಂದಡ್ಕ, ಬಾಲಕೃಷ್ಣ ರೈ ಮೊದಲಾದವರ ಹೆಸರು ಚಾಲ್ತಿಯಲ್ಲಿದೆ.