×
Ad

ಸುಳ್ಯ : ಎಸ್‌ಸಿ, ಎಸ್‌ಟಿ ಸಭೆಗೆ ಬಹುತೇಕ ಅಧಿಕಾರಿಗಳ ಗೈರು, ಆಕ್ರೋಶಗೊಂಡ ದಲಿತ ಮುಖಂಡರಿಂದ ಸಭೆ ಬಹಿಷ್ಕಾರ

Update: 2016-03-29 17:02 IST

ಸುಳ್ಯ: ಮಂಗಳವಾರ ನಡೆಯಬೇಕಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ-ಪಂಗಡದವರ ಕುಂದುಕೊರತೆ ನಿವಾರಣೆ ಸಭೆಗೆ ಎಲ್ಲ ಅಧಿಕಾರಿಗಳು ಹಾಜರಾಗಿಲ್ಲ ಎಂದು ಆಕ್ರೋಶಗೊಂಡ ದಲಿತ ಮುಖಂಡರು ಸಭೆಯನ್ನು ಬಹಿಷ್ಕರಿಸಿದ ಘಟನೆ ನಡೆದಿದೆ.

ಸುಳ್ಯ ತಾ.ಪಂ. ಸಭಾಭವನದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯುವುದೆಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ನೋಟೀಸ್ ಕಳುಹಿಸಿದ್ದರು. ಅದರಂತೆ ಸುಮಾರು 25ಕ್ಕೂ ಹೆಚ್ಚು ದಲಿತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ತಹಶೀಲ್ದಾರ್ ಅನಂತಶಂಕರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗಪ್ಪ ಮತ್ತಿತರ ಕೆಲವೇ ಮಂದಿ ಅಧಿಕಾರಿಗಳಷ್ಟೇ ಸಭೆಯಲ್ಲಿದ್ದರು. ಇದು ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಸಭೆ ಬಹಿಷ್ಕರಿಸಿ ಹೊರ ಬಂದ ಅವರು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣ ಜಟ್ಟಿಪಳ್ಳ, ದಲಿತರ ಸಭೆಗೆ ಅಧಿಕಾರಿಗಳು ಅವಮಾನ ಮಾಡಿದ್ದಾರೆ ಎಂದು ಹೇಳಿದರು. ಹಲವು ತಿಂಗಳುಗಳ ಬಳಿಕ ಸಭೆ ನಡೆಯುತ್ತಿದೆ. ಅದರೆ ಇಲ್ಲಿ ದಲಿತರ ಸಮಸ್ಯೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿಯೇ ಅಧಿಕಾರಿಗಳು ಸಭೆಗೆ ಹಾಜರಾಗಿಲ್ಲ ಎಂದು ಆನಂದ ಬೆಳ್ಳಾರೆ ಹೇಳಿದರು. ಅಚ್ಚುತ ಮಲ್ಕಜೆ ಮಾತನಾಡಿ, ನಮಗೆ ಸಭೆಯಲ್ಲಿ ಹಲವು ವಿಚಾರ ಚರ್ಚಿಸಿ ಪರಿಹಾರ ಕಂಡುಕೊಳ್ಳಲಿತ್ತು. ಆದರೆ ಅಧಿಕಾರಿಗಳು ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಹೇಳಿದರು. ಪ್ರತೀ ಬಾರಿ ಆಹ್ವಾನ ಪತ್ರದಲ್ಲಿ ಸರಕಾರಿ ಅಧಿಕಾರಿಗಳಿಗೆ ನೋಟೀಸ್ ಕಳುಹಿಸಿದ ಮಾಹಿತಿ ಇರುತ್ತಿತ್ತು. ಆದರೆ ಈ ಬಾರಿ ದಲಿತ ಮುಖಂಡರ ಹೆಸರು ಮಾತ್ರ ಇದೆ. ಹಾಗಾದರೆ ಅವರಿಗೆ ಮಾತ್ರ ಆಹ್ವಾನ ನೀಡಲಾಗಿದೆಯೇ ಎಂದು ಸೀತಾನಂದ ಬೇರ್ಪಡ್ಕ ಪ್ರಶ್ನಿಸಿದರು
ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಅವರ ಕೆಳಮಟ್ಟದ ಅಧಿಕಾರಿಗಳೇಬರುವುದಿಲ್ಲ ಎಂದರೆ ಏನರ್ಥ. ಈ ಕುರಿತು ಸರಕಾರಕ್ಕೆ ದೂರು ಸಲ್ಲಿಸುತ್ತೇವೆ ಎಂದು ಕೆ.ಎಂ.ಬಾಬು ಹೇಳಿದರು. ತಾಲೂಕಿನಲ್ಲಿ ನೀರಿನ ಸಮಸ್ಯೆ ಇದೆ. ಜಾತಿ ಸರ್ಟಿಫಿಕೇಟ್ ಸಮಸ್ಯೆ ಇದೆ. ಇದನ್ನೆಲ್ಲಾ ಪ್ರಸ್ತಾಪಿಸಬೇಕಿದ್ದ ಸಭೆಗೆ ಅಧಿಕಾರಿಗಳು ಬಾರದಿರುವುದು ನಮಗೆ ಅವಮಾನ ಮಾಡಿದಂತೆ ಎಂದು ನಂದರಾಜ ಸಂಕೇಶ ಹೇಳಿದರು
ಸರಸ್ವತಿ ಬೊಳಿಯಮಜಲು, ಶಂಕರ್ ಪೆರಾಜೆ, ಆನಂದ ಕೆಂಬಾರೆ, ಕೆ.ಕೆ.ನಾಯ್ಕ, ಚನಿಯ ಕಲ್ತಡ್ಕ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ಸಭೆಯ ಕುರಿತಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅನಂತಶಂಕರ್, ಈ ಬಾರಿ ಎಲ್ಲ ಅಧಿಕಾರಿಗಳು ಹಾಜರಾಗಿಲ್ಲ. ಎಲ್ಲರನ್ನು ಭರಿಸುವ ಕಾರ್ಯ ಇಲಾಖೆ ಮಾಡಬೇಕಿತ್ತು. ಎ.12ರಂದು ಮತ್ತೆ ಎಲ್ಲರನ್ನು ಸೇರಿಸಿ ಸಭೆ ನಡೆಸಲು ಸೂಚಿಸಿದ್ದೇನೆ ಎಂದರು.
ಪ್ರತಿಭಟನೆಯ ಬಳಿಕ ಮುಖಂಡರು ಸಭೆ ಕರೆದ ಸಮಾಜ ಕಲ್ಯಾಣಾಧಿಕಾರಿ ರಾಮಕೃಷ್ಣ ಭಟ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೆಲವು ಗೊಂದಲಗಳಾಗಿರುವುದು ನಿಜ. ನನಗೆ ಹಲವು ಪ್ರಭಾರಗಳ ಒತ್ತಡಗಳಿರುವುದರಿಂದ ಸುಸೂತ್ರವಾಗಿ ನಿರ್ವಹಿಸಲು ಕಷ್ಟಸಾಧ್ಯವಾಯಿತು. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ತಹಶೀಲ್ದಾರ್ ಸೂಚನೆ ಮೇರೆಗೆ ಪುನಃ ನೋಟೀಸ್ ಮಾಡಿ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿ ಸಭೆ ನಡೆಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News