ಎಪ್ರಿಲ್ 2ರಂದು ಗುತ್ತಿಗಾರಿನಲ್ಲಿ ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ತಂಡಗಳು ಭಾಗಿ
ಸುಳ್ಯ: ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳ ಅಂತರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವು ಎ.2ರಂದು ಗುತ್ತಿಗಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಗುತ್ತಿಗಾರು ಗ್ರಾ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಿಸಿಆರ್.ಟಿ ಘಟಕ ಸುಳ್ಯ ಹಾಗೂ ಗುತ್ತಿಗಾರು ಹಿ.ಪ್ರಾ.ಶಾಲಾ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಚಿನ್ನಪ್ಪ ಗೌಡ ಎಂ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪೂರ್ವಾಹ್ನ ಮೆರವಣಿಗೆ ನಡೆಯಲಿದ್ದು, ಬಳಿಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಾಸಕ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ಜಿ.ಪಂ. ಸದಸ್ಯೆ ಆಶಾತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಮೂರು ರಾಜ್ಯಗಳ ಕಲಾಪ್ರದರ್ಶನ ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಸದ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು
ಇದೊಂದು ಸಾಂಸ್ಕೃತಿಕ ಬೆಸುಗೆಯ ಕಾರ್ಯಕ್ರಮ. ತಮ್ಮ ತಮ್ಮ ರಾಜ್ಯ ಕಲಾಪರಂಪರೆಯನ್ನು ಪ್ರಕಟಪಡಿಸಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದೇವೆ. ಜೊತೆಗೆ ಎಲಿಮಲೆ ಸರಕಾರಿ ಪ್ರೌಢಶಾಲೆಗೂ ಹೊರರಾಜ್ಯಗಳ ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ ಎಂದರು. ನಿವೃತ್ತ ಶಿಕ್ಷಣ ಸಂಯೋಜಕ ಕೇಶವ ಸಿ.ಎ. ಪತ್ರಿಕಾಗೋಷ್ಠಿಯಲ್ಲಿದ್ದರು.