ಸುಳ್ಯದಲ್ಲಿ ಸರಣಿ ಅಪಘಾತ; ವಿದ್ಯಾರ್ಥಿ ದುರ್ಮರಣ - ಹಲವರಿಗೆ ಗಾಯ
ಸುಳ್ಯ: ಸುಳ್ಯ ತಾಲೂಕಿನಲ್ಲಿ ಸೋಮವಾರ ಮತ್ತು ಮಂಗಳವಾರ ಸರಣಿ ಅಪಘಾತಗಳು ಸಂಭವಿಸಿದ್ದು, ಇಬ್ಬರು ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದಾರೆ.
ಸೋಮವಾರ ಸಂಜೆಯಷ್ಟೇ ಸುಳ್ಯದಲ್ಲಿ ಲಾರಿ ಮತ್ತು ಬೈಕ್ ಢಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದರು. ಸೋಮವಾರ ಮಧ್ಯರಾತ್ರಿ ಮತ್ತೊಂದು ಅಪಘಾತ ನಡೆದಿದೆ. ಪಡ್ಪಿನಂಗಡಿ ಸಮೀಪದ ಮುಚ್ಚಿಲ ಮಸೀದಿ ಬಳಿ ಕಾರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಪೆರುವಾಜೆ ಗ್ರಾಮದ ಹಸೈನಾರ್ ಎಂಬವರ ಪುತ್ರ, ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಮಹಮ್ಮದ್ ಜಾಹೀರ್ ಮೃತಪಟ್ಟ ವಿದ್ಯಾರ್ಥಿ. ಮುಚ್ಚಿಲ ಮಸೀದಿಯಲ್ಲಿ ನಡೆದ ವಾರ್ಷಿಕ ಸ್ವಲಾತ್ ಕಾರ್ಯಕ್ರಕ್ಕೆ ಜಾಹೀರ್ ತನ್ನ ಸಂಬಂಧಿಯೂ ಆಗಿರುವ ಪೆರುವಾಜೆಯ ಇರ್ಷಾದ್ ಎಂಬವರೊಂದಿಗೆ ತೆರಳಿದ್ದರು. ಮಧ್ಯರಾತ್ರಿ ಕಾರ್ಯಕ್ರಮ ಮುಗಿಸಿ ವಾಪಾಸ್ ಬರುತ್ತಿದ್ದಾಗ ಬೈಕ್ ಎದುರಿನಿಂದ ಬರುತ್ತಿದ್ದ ಮಾರುತಿ ಝೆನ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಜಾಹೀರ್ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಹಸವಾರ ಇರ್ಶಾದ್‌ನ ಕೈ ಹಾಗೂ ಸೊಂಟಕ್ಕೆ ಗಾಯವಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾಹೀರ್ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಶವಾಗಾರದಲ್ಲಿಡಲಾಯಿತು. ಮಂಗಳವಾರ ಪೆರುವಾಜೆಗೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಲಾಯಿತು. ಜಾಹಿರ್ ತಂದೆ, ತಾಯಿ ಸೇರಿದಂತೆ ನಾಲ್ವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾನೆ.