ವಿದ್ಯಾರ್ಥಿ ಶಕ್ತಿಗಳನ್ನು ದಮನ ಮಾಡುವ ಸರಕಾರಗಳು ಈವರೆಗೆ ಉಳಿದಿಲ್ಲ: ಎಸ್.ಐ.ಓ ರಾಜ್ಯಾಧ್ಯಕ್ಷ ಲಬೀದ್ ಶಾಫಿ
ಮಂಗಳೂರು: ವಿದ್ಯಾರ್ಥಿ ಶಕ್ತಿಗಳನ್ನು ವ್ಯವಸ್ಥಿತವಾಗಿ ಷಡ್ಯಂತ್ರದ ಮೂಲಕ ದಮನ ಮಾಡುವ ಯಾವುದೇ ಸರಕಾರಗಳು ಇದುವರೆಗೆ ಉಳಿದಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಹಲವರು ಕ್ಯಾಂಪಸ್ಸಿನಿಂದಲೇ ಹುಟ್ಟಿ ಬಂದಿರುವುದು ಸರಕಾರವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಹೇಳಿದರು.
ಅವರು ಇಂದು ನಗರದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ, ದ.ಕ. ಜಿಲ್ಲಾ ಘಟಕದ ವತಿಯಿಂದ ನಡೆದ ದೇಶದ ವಿವಿಧ ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ನಡೆದ ಪ್ರಜಾಸತ್ತಾತ್ಮಕ ಕ್ಯಾಂಪಸ್ ನಿರ್ಮಾಣಕ್ಕಾಗಿ ನಮ್ಮ ನಡಿಗೆ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಅನ್ಯಾಯದ ವಿರುದ್ಧ ಮಾತನಾಡುವ ಅಮಾಯಕ ವಿದ್ಯಾರ್ಥಿಗಳ ವಿರುದ್ಧ ಇಲ್ಲಸಲ್ಲದ ಕೇಸುಗಳನ್ನು ದಾಖಲಿಸಿ, ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನಡೆಸುತ್ತಿರುವುದು ಖಂಡನೀಯ. ಹೈದರಾಬಾದ್ ವಿವಿಯಲ್ಲಿ ಸುಮಾರು 3500 ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳನ್ನು ದಿಗ್ಬಂಧನ ವಿಧಿಸಿ, ಅಘೋಷಿತ ತುರ್ತು ವಾತಾವರಣವನ್ನು ನಿರ್ಮಿಸಲು ವಿವಿಗಳ ಕುಲಪತಿಗಳ ಮೂಲಕ ಅಘೋಷಿತ ತುರ್ತು ವಾತಾವರಣವನ್ನು ಸರಕಾರಗಳು ನಿರ್ಮಾಣ ಮಾಡುತ್ತಿವೆ ಎಂದರು.
ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವೆ ಸ್ಮತಿ ಇರಾನಿ ರಾಜೀನಾಮೆ ನೀಡಬೇಕು ಹಾಗೂ ರೋಹಿತ್ ವೇಮುಲಾರ ಸಾವಿಗೆ ಕಾರಣರಾದ ಹೈದರಾಬಾದ್ ವಿವಿ ಕುಲಪತಿ ಅಪ್ಪಾರಾವ್‌ರನ್ನು ಹುದ್ದೆಯಿಂದ ಕಿತ್ತೆಸೆಯಬೇಕು. ಇದೇ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎಸ್ ಐ ಓ ವತಿಯಿಂದ ರಾಜ್ಯಮಟ್ಟದ ಬೃಹತ್ ಪ್ರತಿಭಟನೆಯು ಎಪ್ರಿಲ್ 9 ರಂದು ಹಮ್ಮಿಕೊಳ್ಳಲಾಗಿದೆ ಎಂದು ಲಬೀದ್ ಶಾಫಿ ತಿಳಿಸಿದರು.
ಇದೇ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸನ್ಮಾರ್ಗ ಪತ್ರಿಕೆಯ ಸಂಪಾದಕ ಏ.ಕೆ. ಕುಕ್ಕಿಲ ದೇಶದ ವಿವಿಧೆಡೆ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಿದರೆ ಅದನ್ನು ಹತ್ತಿಕ್ಕುವ ಕೆಲಸಗಳು ಸರಕಾರಗಳು ವ್ಯವಸ್ಥಿತವಾಗಿ ಮಾಡುತ್ತಿರುವಾಗ ಆಝಾದಿಯ ಕೂಗು ಪ್ರತಿಯೊಂದು ಕ್ಯಾಂಪಸ್‌ಗಳಲ್ಲಿಯೂ ಮೊಳಗಬೇಕು. ಕೇಂದ್ರದ ಮೂವರು ಮಂತ್ರಿಗಳು ಕ್ರಿಶ್ಚಿಯನ್ನರ ಶೋಕದ ದಿನ ಗುಡ್ ಫ್ರೈಡೇಗೂ ಹ್ಯಾಪಿ ಗುಡ್ ಪ್ರೈಡ್ ಎಂದು ಸಂದೇಶ ನೀಡುವ ಮೂಲಕ ತಮ್ಮ ವಿಕೃತಿಯ ಮನೋಭಾವವನ್ನು ಮೆರೆದಿದ್ದಾರೆ. ನಿಜಕ್ಕೂ ಖೇದನೀಯ ಎಂದು ವಿಷಾದ ವ್ಯಕ್ತಪಡಿಸಿದರು. ಇದೇ ವೇಳೆ ತುರ್ತು ಪರಿಸ್ಥಿತಿಯ ಬಳಿಕ ದೇಶದಲ್ಲಿ ಆಝಾದಿಯ ಕೂಗಿಗೆ ಕಾರಣರಾದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮತಿ ಇರಾನಿಗೆ ಅಭಿನಂದನೆ ಸಲ್ಲಿಸಬೇಕಿದೆ ಎಂದು ಪರೋಕ್ಷವಾಗಿ ಕುಟುಕಿದರು.
ಸಭೆಗೆ ಮೊದಲು ಜ್ಯೋತಿ ಅಂಬೇಡ್ಕರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ್ಯಾಲಿ ನಡೆಯಿತು. ಎಸ್ ಐ ಓ ಜಿಲ್ಲಾ ಕಾರ್ಯದರ್ಶಿ ಅಸ್ಲಂ ಪಂಜಾಲ, ತಾಲೂಕು ಅಧ್ಯಕ್ಷ ಆಶಿಕ್ ಹಶಾಸ್, ಸೋಲಿಡಾರಿಟಿ ಯೂತ್ ಮೂಮೆಂಟ್ ಜಿಲ್ಲಾಧ್ಯಕ್ಷ ಮುಸ್ತಾಕ್ ಪಟ್ಲ, ಜಮಾಅತೆ ಇಸ್ಲಾಮಿ ಹಿಂದ್ ನ ದ.ಕ. ಜಿಲ್ಲಾ ಹೊಣೆಗಾರರಾದ ಇಲ್ಯಾಸ್ ಇಸ್ಮಾಯೀಲ್, ಮಂಗಳೂರು ಅಧ್ಯಕ್ಷ ಮುಹಮ್ಮದ್ ಕುಂಞ, ಜಿ.ಐ.ಓ ಜಿಲ್ಲಾಧ್ಯಕ್ಷೆ ಸಲ್ಮಾ ಸಈದ್ ಉಪಸ್ಥಿತರಿದ್ದರು. ಎಸ್.ಐ.ಓ. ಸದಸ್ಯ ದಾನಿಶ್ ಪಾಣೆಮಂಗಳೂರು ನಿರೂಪಿಸಿದರು.