×
Ad

ಪುತ್ತೂರು : ನಗರಸಭೆ 6 ಸದಸ್ಯರ ಸದಸ್ಯತ್ವ ರದ್ದು, ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟು

Update: 2016-03-29 19:29 IST

  ಪುತ್ತೂರು : ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಸಹಿತ 6 ಮಂದಿ ಸದಸ್ಯರ ಸದಸ್ಯತ್ವ ರದ್ದತಿಯ ಕುರಿತಂತೆ ಪ್ರಶ್ನಿಸಿ ಹೈಕೋರ್ಟಿನಲ್ಲಿ ಹೂಡಿದ್ದ ದಾವೆಯ ತೀರ್ಪನ್ನು ಹೈಕೋರ್ಟು ಮಂಗಳವಾರ ಪ್ರಕಟಿಸಿದ್ದು, ಸದಸ್ಯತ್ವ ರದ್ದುಗೊಳಿಸಿ ದ.ಕ.ಜಿಲ್ಲಾಧಿಕಾರಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟು ಎತ್ತಿ ಹಿಡಿದಿದೆ.
   
    ಹೈಕೋರ್ಟು ತೀರ್ಪಿನಿಂದಾಗಿ ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ಅವರನ್ನು ಬೆಂಬಲಿಸಿದ್ದ ಸದಸ್ಯರಾದ ನವೀನ್ ನಾಕ್ ಬೆದ್ರಾಳ, ದೀಕ್ಷಾ ಪೈ, ಸೀಮಾ ಗಂಗಾಧರ್, ಕಮಲಾ ಆನಂದ್ ಮತ್ತು ರೇಖಾ ಯಶೋಧರ್ ಅವರ ಸದಸ್ಯತ್ವ ರದ್ದುಗೊಂಡಿದೆ.  ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯ ವೇಳೆ ಕಾಂಗ್ರೆಸ್ ಪಕ್ಷ ನೀಡಿದ್ದ ವಿಫ್ ಉಲ್ಲಂಘಿಸಿದ ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಹೊರಿಸಿ ಸದಸ್ಯ ಎಚ್.ಮಹಮ್ಮದ್ ಆಲಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಸಹಿತ ಅವರನ್ನು ಬೆಂಬಲಿಸಿದ್ದ 6 ಮಂದಿ ಸದಸ್ಯರ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಕೋರಿ ಜಿಲ್ಲಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ನ್ಯಾಯಾಲಯ ಕಳೆದ 2015ನೇ ಮೇ 2ರಂದು ಈ ಆರು ಮಂದಿಯ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶ ನೀಡಿತ್ತು. ಕರ್ನಾಟಕ ಸ್ಥಳೀಯ ಸಂಸ್ಥೆಗಳ (ಪಕ್ಷಾಂತರ ನಿಷೇಧ) ಕಾಯ್ದೆಯ ಕಲಂ -1987ರ ಕಲಂ -3(1) (ಬಿ) ಮತ್ತು 4(2) (3)ರ ಅನ್ವಯ ಈ ಆರು ಮಂದಿಯ ಸದಸ್ಯತ್ವ ರದ್ದುಗೊಳಿಸಲಾಗಿತ್ತು. ಜಿಲ್ಲಾಧಿಕಾರಿಗಳು ನೀಡಿದ್ದ ಸದಸ್ಯತ್ವ ಅನರ್ಹತೆಯ ಆದೇಶದ ವಿರುದ್ಧ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ಅವರ ಬೆಂಬಲಿಗರು ಹೈಕೋರ್ಟು ಮೊರೆ ಹೋಗಿದ್ದರು.ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ, ಸದಸ್ಯತ್ವವನ್ನು ತಾತ್ಕಾಲಿಕವಾಗಿ ಉಳಿಸಿಕೊಟ್ಟಿತ್ತು. ಆದರೆ ಮತದಾನದ ಹಕ್ಕು ನಿರಾಕರಿಸಿತ್ತು. ಸುದೀರ್ಘ ವಿಚಾರಣೆಯ ಬಳಿಕ ಮಂಗಳವಾರ ತೀರ್ಪು ಪ್ರಕಟಿಸಿರುವ ಹೈಕೋರ್ಟು ಜಿಲ್ಲಾಧಿಕಾರಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮಾನ್ಯ ಮಾಡಿದೆ. ಪುತ್ತೂರು ನಗರಸಭೆಯ ಹಾಲಿ ಅಧ್ಯಕ್ಷ - ಉಪಾಧ್ಯಕ್ಷರ ಅಧಿಕಾರಾವಧಿ ಮಾರ್ಚ್ 10ಕ್ಕೆ ಮುಕ್ತಾಯಗೊಂಡಿದ್ದು, ಹೊಸ ಮೀಸಲಾತಿ ಪಟ್ಟಿಯ ಪ್ರಕಾರ ಅದೇ ದಿನ ನೂತನ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಆದರೆ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ಅವರ ಬೆಂಬಲಿಗ ತಂಡದವರು ನಮ್ಮ ಸದಸ್ಯತ್ವ ಪ್ರಕರಣ ಇತ್ಯರ್ಥವಾಗದೆ ಚುನಾವಣೆ ನಡೆಸಬಾರದು ಎಂದು ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದ ಕಾರಣ ನ್ಯಾಯಾಲಯ ಚುನಾವಣೆಗೆ ತಡೆ ನೀಡಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಪುತ್ತೂರು ನಗರಸಭೆಯ ಆಡಳಿತಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಧ್ಯಕ್ಷರಾಗಿದ್ದ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅವರ ಸದಸ್ಯತ್ವ ರದ್ದುಗೊಂಡ ಬಳಿಕ ಉಪಾಧ್ಯಕ್ಷ ಜೀವಂಧರ್ ಜೈನ್ ಅವರು ಮತ್ತೆ ಪ್ರಭಾರ ಅಧ್ಯಕ್ಷರಾಗಿ ಮುಂದುವರಿದಿದ್ದರು.

ಪುತ್ತೂರು ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷ 27 ಸ್ಥಾನಗಳ ಪೈಕಿ 15ನ್ನು ಪಡೆದುಕೊಂಡು ಬಹುಮತ ಹೊಂದಿತ್ತು. 2013ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಾಣಿ ಶ್ರೀಧರ್ ಅವರು ಬಿಜೆಪಿ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾಗಿದ್ದರು. ಆ ವೇಳೆ ವಾಣಿ ಶ್ರೀಧರ್ ಅವರ ಬೆಂಬಲದೊಂದಿಗೆ ಬಿಜೆಪಿಯ ಜೀವಂಧರ್ ಜೈನ್ ಅವರು ಉಪಾಧ್ಯಕ್ಷರಾಗಿದ್ದರು. ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಎಚ್. ಮಹಮ್ಮದ್ ಆಲಿ ಅವರು ವಾಣಿಶ್ರೀಧರ್ ವಿರುದ್ಧ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. 2014ರ ಆಗಸ್ಟ್ 22ರಂದು ತೀರ್ಪು ನೀಡಿದ ನ್ಯಾಯಾಲಯ ವಾಣಿ ಶ್ರೀಧರ್ ಅವರ ಸದಸ್ಯತ್ವವನ್ನು ರದ್ದುಗೊಳಿಸಿತ್ತು. ಇದರ ವಿರುದ್ಧ ವಾಣಿಶ್ರೀಧರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ವಾಣಿಶ್ರೀಧರ್ ಅವರು ಅಧಿಕಾರ ಕಳೆದುಕೊಂಡ ಬಳಿಕ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅವರು 5 ಮಂದಿ ಸದಸ್ಯರ ಬೆಂಬಲದೊಂದಿಗೆ ಬಂಡಾಯವಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಪಕ್ಷ ಆ ವೇಳೆ ಜಾರಿಗೊಳಿಸಿದ್ದ ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲದಲ್ಲಿ ಅಧ್ಯಕ್ಷರಾಗಿದ್ದರು. ಉಪಾಧ್ಯಕ್ಷರಾಗಿ ಮತ್ತೆ ಬಿಜೆಪಿಯ ಜೀವಂಧರ್ ಜೈನ್ ಅವರೇ ಮುಂದುವರಿದಿದ್ದರು. ಎರಡನೇ ಬಾರಿಯೂ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹಮ್ಮದ್ ಆಲಿ ಅವರು ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಹಾಗೂ ಉಳಿದ 5 ಮಂದಿಯ ಸದಸ್ಯತ್ವವನ್ನು ರದ್ದುಪಡಿಸುವಂತೆ ಕೋರಿ ಜಿಲ್ಲಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ 2015ರ ಜನವರಿಯಲ್ಲಿ ಪುತ್ತೂರು ನಗರಸಭೆಯಾಗಿ ಮೇಲ್ದರ್ಜೆಗೇರಿತ್ತು. ನೂತನ ನಗರಸಭೆಯ ಮೊದಲ ಅಧ್ಯಕ್ಷರಾಗಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮುಂದುವರಿದಿದ್ದರು. 2015ರ ಮೇ 7ರಂದು ಈ ಆರು ಮಂದಿಯ ಸದಸ್ಯತ್ವ ರದ್ದಾದ ಕಾರಣ ಜಗದೀಶ್ ಶೆಟ್ಟಿ ಅವರು ಅಧ್ಯಕ್ಷತೆ ಕಳೆದುಕೊಂಡಿದ್ದರು. ಆ ಬಳಿಕ ಜೀವಂಧರ್ ಜೈನ್ ಅವರು ಪ್ರಭಾರ ಅಧ್ಯಕ್ಷರಾಗಿ ಮುಂದುವರಿದಿದ್ದರು. ತೀರ್ಪಿಗೆ ತಲೆಬಾಗುವೆ: ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಜಿಲ್ಲಾಧಿಕಾರಿ ನ್ಯಾಯಾಲಯದ ತೀರ್ಪಿನ ವಿರುದ್ಧ ರಿಟ್ ಸಲ್ಲಿಸಿದ್ದೆವು. ಅದನ್ನು ಹೈಕೋರ್ಟ್ ತಳ್ಳಿಹಾಕಿದೆ. ನ್ಯಾಯಾಲಯದ ತೀರ್ಪಿಗೆ ತಲೆ ಬಾಗುತ್ತೇವೆ ಎಂದು ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಕೋರ್ಟು ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News