ಮಂಗಳೂರು : ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ನಿಲ್ಲಲಿ: ಎಸ್‌ಐಓ
ಮಂಗಳೂರು, ಮಾ.28: ದೇಶದ ವಿವಿಧೆಡೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಇಂದು ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಓ) ವತಿಯಿಂದ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ‘ಸನ್ಮಾರ್ಗ’ ವಾರ ಪತ್ರಿಕೆಯ ಸಂಪಾದಕ ಎ.ಕೆ.ಕುಕ್ಕಿಲ, ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಅದನ್ನು ಹತ್ತಿಕ್ಕುವ ಕೆಲಸಗಳು ನಡೆಯುತ್ತಿವೆ. ಧ್ವನಿ ಎತ್ತುವ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯಗಳು ನಡೆಯುತ್ತಿವೆ. ಇತ್ತೀಚಿನ ಬೆಳವಣಿಗೆಗಳು ಇದಕ್ಕೆ ಸಾಕ್ಷಿಯಾಗಿವೆ ಎಂದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಮುಸ್ಲಿಮರ ಅಝಾನ್ (ನಮಾಝಿನ ಕರೆ)ನ ಸಂದರ್ಭದಲ್ಲಿ ತಮ್ಮ ಭಾಷಣವನ್ನು ನಿಲ್ಲಿಸಿ ಅಝಾನ್‌ಗೆ ಗೌರವಿಸಿದ್ದರು. ಆದರೆ, ಇನ್ನೊಂದೆಡೆ ಸಂಘಪರಿವಾರದವರು, ಕೆಲವು ಸ್ವಾಮೀಜಿಗಳು ಮುಸ್ಲಿಮರು ಅಝಾನ್ ನೀಡುವುದನ್ನು ನಿಲ್ಲಿಸಬೇಕೆನ್ನುತ್ತಾರೆ. ಇವೆಲ್ಲ ರಾಜಕೀಯ ಗಿಮಿಕ್ಸ್ ಎಂದು ಹೇಳಿದರು.
ಎಸ್‌ಐಓ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಮಾತನಾಡಿ, ಮಾನವ ಹಕ್ಕು ಉಲ್ಲಂಘನೆಯ ವಿರುದ್ಧ ಮಾತನಾಡಿದರೆ ದೇಶದ್ರೋಹದ ಹಣೆಪಟ್ಟಿ ಕಟ್ಟಲಾಗುತ್ತದೆ. ಇಂತಹ ಸ್ಥಿತಿ ಬದಲಾಗಬೇಕು. ವಿದ್ಯಾರ್ಥಿಗಳನ್ನು ಎದುರು ಹಾಕಿಕೊಂಡು ರಾಜಕೀಯ ನಡೆಸಿದ ಸರಕಾರಗಳು ದೀರ್ಘ ಕಾಲ ಉಳಿದಿಲ್ಲ ಎಂದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಜಿಲ್ಲಾ ಸಂಚಾಲಕ ಇಲ್ಯಾಸ್ ಇಸ್ಮಾಯೀಲ್, ಮಂಗಳೂರು ನಗರಾಧ್ಯಕ್ಷ ಮುಹಮ್ಮದ್ ಕುಂಞಿ, ಗಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ (ಜಿಐಓ)ನ ಜಿಲ್ಲಾಧ್ಯಕ್ಷೆ ಸಲ್ಮಾ ಸಯೀದ್ ಮೊದಲಾದವರು ಉಪಸ್ಥಿತರಿದ್ದರು. ಎಸ್‌ಐಓ ನೂರಾರು ಕಾರ್ಯಕರ್ತರು ಜ್ಯೋತಿ ಸರ್ಕಲ್‌ನಿಂದ ಸ್ಟೇಟ್‌ಬ್ಯಾಂಕ್‌ವರೆಗೆ ರ್ಯಾಲಿ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.