×
Ad

ಉಪ್ಪಿನಂಗಡಿ: ಬೈಕ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಸವಾರ ಸ್ಥಳದಲ್ಲೇ ಸಾವು, ಸಹ ಸವಾರ ಗಂಭೀರ ಗಾಯ

Update: 2016-03-29 21:03 IST

 ಉಪ್ಪಿನಂಗಡಿ: ದ್ವಿಚಕ್ರ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಮುರಿಯಾಳ ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

 ಬಂದಾರು ಗ್ರಾಮದ ಬೊಳಿಜಾ ನಿವಾಸಿ ಮಾಧವ ಪೂಜಾರಿಯವರ ಪುತ್ರ ಕೃತಿಕ್ (17) ಮೃತ ದ್ವಿಚಕ್ರ ವಾಹನ ಸವಾರ. ಸಹಸವಾರ ಕಾರಿಂಜ ಬೈತಾರು ನಿವಾಸಿ ಸಫಿಯಾ ಎಂಬವರ ಪುತ್ರ ರಫೀಕ್ (23) ಗಂಭೀರ ಗಾಯಗೊಂಡಿದ್ದು, ಈತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವಿವರ: ಕಾರಿಂಜ ಬೈತಾರು ಕಡೆಯಿಂದ ಇಂದು ಬೆಳಗ್ಗೆ ಕೃತಿಕ್ ಟಿವಿಎಸ್ ಕಂಪೆನಿಯ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಕರಾಯ ಕಡೆಗೆ ಬಂದಿದ್ದು, ಈ ಸಂದರ್ಭ ಕೂಲಿ ಕಾರ್ಮಿಕ ರಫೀಕ್ ಎಂಬಾತ ಈತನಲ್ಲಿ ಕರಾಯಕ್ಕೆ ಡ್ರಾಪ್ ಕೇಳಿದ್ದಾನೆ. ಆತನನ್ನು ದ್ವಿಚಕ್ರ ವಾಹನದ ಹಿಂಬದಿ ಕುಳ್ಳಿರಿಸಿಕೊಂಡು ತುಸು ದೂರ ತಲುಪಬೇಕಾದರೆ, ಕಾರಿಂಜ ಬೈತಾರು ನಿವಾಸಿ ಚೆನ್ನಪ್ಪ ಗೌಡರ ಮನೆಗೆ ತೆರಳುತ್ತಿದ್ದ ಕೊಳವೆ ಬಾವಿ ಪೈಪ್ ಸಾಗಾಟದ ಲಾರಿ ಮುರಿಯಾಳ ಎಂಬಲ್ಲಿ ಇವರ ದ್ವಿಚಕ್ರ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಲಾರಿಯೆಡೆಗೆ ಸಿಲುಕಿದ ಕೃತಿಕ್‌ನನ್ನು ಹರಸಾಹಸ ಪಟ್ಟು ಹೊರಗೆ ತೆಗೆಯಲಾಗಿದ್ದು, ಅಷ್ಟರಲ್ಲೇ ಈತ ಮೃತಪಟ್ಟಿದ್ದ. ಸಹಸವಾರ ರಫೀಕ್ ಗಂಭೀರ ಗಾಯಗೊಂಡಿದ್ದಾನೆ.
ಮೃತನ ತಂದೆ ಬೀಡಿ ಬ್ರಾಂಚ್ ನಡೆಸುತ್ತಿದ್ದು, ಈತನಿಗೆ ತಂದೆ, ತಾಯಿ ಹಾಗೂ ಓರ್ವ ಸಹೋದರ ಇದ್ದಾನೆ.

ಮೃತ ಕೃತಿಕ್ ವಿದ್ಯಾರ್ಥಿಯಾಗಿದ್ದು, ಗುರುದೇವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ. ಸೋಮವಾರವಷ್ಟೇ ಕೊನೆಯ ಪರೀಕ್ಷೆ ಬರೆದು ಮನೆಗೆ ಬಂದಿದ್ದ ಈತ ತನ್ನ ನೆರೆಮನೆಯವರು ಕಾರಿಂಜ ಬೈತಾರು ಕಡೆ ಖರೀದಿಸಿದ್ದ ಜಾಗಕ್ಕೆ ನೆರೆಮನೆಯವರದ್ದೇ ದ್ವಿಚಕ್ರ ವಾಹನ ಪಡೆದು ತೆರಳಿದ್ದ ಈತ ನಿನ್ನೆ ರಾತ್ರಿ ಅಲ್ಲಿರುವ ಮನೆಯಲ್ಲೇ ವಾಸ್ತವ್ಯವಿದ್ದು, ಇಂದು ಬೆಳಗ್ಗೆ ತನ್ನ ಮನೆಗೆ ವಾಪಸ್ಸಾಗುತ್ತಿದ್ದ. ಆದರೆ ಮನೆ ತಲುಪುವ ಮೊದಲೇ ಈತ ವಿಧಿಯ ಕ್ರೂರ ಲೀಲೆಗೆ ತುತ್ತಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News