×
Ad

ಪಾಕಿಸ್ತಾನಿ ತನಿಖೆ ತಂಡಕ್ಕೆ ಸೀಮಿತ ಪ್ರದೇಶಕ್ಕೆ ಅವಕಾಶ

Update: 2016-03-29 22:27 IST

ಹೊಸದಿಲ್ಲಿ/ಪಠಾಣ್‌ಕೋಟ್, ಮಾ.29: ಏಳು ಮಂದಿ ಸೇನಾ ಸಿಬ್ಬಂದಿಯ ಸಾವಿಗೆ ಕಾರಣವಾದ ಜನವರಿಯ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ತನಿಖೆಯ ಅಂಗವಾಗಿ, ಐವರು ಪಾಕಿಸ್ತಾನಿ ಅಧಿಕಾರಿಗಳಿಗೆ ಪಠಾಣ್‌ಕೋಟ್ ವಾಯು ಸೇನಾ ನೆಲೆಯ ಸೀಮಿತ ಪ್ರವಾಸವೊಂದಕ್ಕೆ ಅವಕಾಶ ನೀಡಲಾಗಿದೆ. ಅಧಿಕಾರಿಗಳು ಬಸ್ಸೊಂದರಲ್ಲಿ ಆಗಮಿಸುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ವಾಯು ನೆಲೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ಪಾಕಿಸ್ತಾನದ, ಐಎಸ್‌ಐ ಅಧಿಕಾರಿಯೊಬ್ಬನ ಸಹಿತದ ಜಂಟಿ ತನಿಖೆ ತಂಡವನ್ನು ವಾಯು ನೆಲೆಯ ಹಿಂಭಾಗಕ್ಕೆ ಒಯ್ಯಲಾಯಿತು. ಕಾಂಗ್ರೆಸ್ ಹಾಗೂ ಎಎಪಿ ಕಾರ್ಯಕರ್ತರು ಬ್ಯಾನರ್‌ಗಳನ್ನು ಹಿಡಿದು, ಘೋಷಣೆ ಕೂಗುತ್ತ ಹಾಗೂ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಪಾಕಿಸ್ತಾನದ ತನಿಖೆ ತಂಡಕ್ಕೆ ಪಠಾಣ್‌ಕೋಟ್ ವಾಯು ನೆಲೆಯ ಭೇಟಿಗೆ ಅವಕಾಶ ನೀಡಿರುವುದಕ್ಕಾಗಿ ಸರಕಾರವನ್ನು ಟೀಕಿಸಿದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಇದೇ ಮೊದಲ ಬಾರಿಗೆ ಪಾಕಿಸ್ತಾನವು ತನಿಖೆಯ ಬಗ್ಗೆ ಗಂಭೀರ ಪ್ರಯತ್ನ ನಡೆಸಿದೆ ಎಂದಿದ್ದಾರೆ.
ಎಎಪಿಯ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಐಎಸ್‌ಐ ಹಾಗೂ ಬಿಜೆಪಿಯ ಮೈತ್ರಿಕೂಟವಿದೆಂದು ಆರೋಪಿಸಿದ್ದಾರೆ.
ಐಎಸ್‌ಐಗೆ ಮೋದಿ ಯಾಕೆ ಬಿರಿಯಾನಿ ನೀಡುತ್ತಿದ್ದಾರೆ? ನಮ್ಮ ಜನರನ್ನು ಕೊಂದಿರುವ ಅದೇ ಜನರು ಇಲ್ಲಿಗೆ ಬಂದಿದ್ದಾರೆ. ಇದು ಅತ್ಯಂತ ನಾಚಿಕೆಗೇಡು ಹಾಗೂ ಅಸಹನೀಯ ಎಂದವರು ಹೇಳಿದ್ದಾರೆ.
ಜನವರಿ 2ರಂದು ಭದ್ರತಾ ಪಡೆಗಳೊಂದಿಗೆ 6 ಮಂದಿ ಭಯೋತ್ಪಾದಕರು ಗುಂಡು ವಿನಿಮಯ ನಡೆಸಿದ್ದ, ವ್ಯೆಹಾತ್ಮಕ ವಾಯುದಳದ ವಿಮಾನ ನೆಲೆಯ ಭಾಗವೊಂದಕ್ಕೆ ಪಾಕಿಸ್ತಾನ ತಂಡವನ್ನು ಕರೆದೊಯ್ಯಲಾಗಿದೆ. ಅದು ಸೂಕ್ಷ್ಮಪ್ರದೇಶವಲ್ಲವೆಂದು ಸರಕಾರ ತಿಳಿಸಿದೆ.
ತಂಡಗಳಿಗೆ ತಾಂತ್ರಿಕ ಪ್ರದೇಶಗಳ ಪ್ರಾಥಮಿಕ ದರ್ಶನವೂ ಲಭಿಸದಂತೆ ಅವುಗಳ ಸುತ್ತ ತಡೆ ಬೇಲಿ ಹಾಕಲಾಗಿದೆ. ಬಿಳಿ, ಕೆಂಪು ಹಾಗೂ ಹಳದಿ ಟೆಂಟ್‌ಗಳು ಈ ಪ್ರದೇಶಗಳನ್ನು ಕಾಣದಂತೆ ಮಾಡಿವೆ. ಪಾಕಿಸ್ತಾನಿ ತಂಡವನ್ನು ‘ಭಯೋತ್ಪಾದಕರ ದಾರಿಯನ್ನು ಪತ್ತೆ ಮಾಡುವುದಕ್ಕಾಗಿ ಗಡಿಗೆ ಕರೆದೊಯ್ಯಲಾಗುವುದೆಂದು ಅಧಿಕಾರಿಗಳು ವಿವರಿಸಿದ್ದಾರೆ.
ಭಾರತವು, ಭಯೋತ್ಪಾದಕರಿಂದ ಅಪಹರಿಸಲ್ಪಟ್ಟಿದ್ದರೆನ್ನಲಾಗಿರುವ ಪಂಜಾಬ್ ಪೊಲೀಸ್ ಅಧಿಕಾರಿ ಸಹಿತ, ಪ್ರಮುಖ ಸಾಕ್ಷಿಗಳ ಭೇಟಿಗೆ ಪಾಕಿಸ್ತಾನಿ ತಂಡಕ್ಕೆ ಅವಕಾಶ ನೀಡಿತ್ತಾದರೂ, ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಲು ಅದಕ್ಕೆ ಅವಕಾಶ ನೀಡುವುದಿಲ್ಲವೆಂದು ಅದು ಸ್ಟಷ್ಪಪಡಿಸಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News