ಸೆನ್ಸಾರ್ ಸರ್ಟಿಫಿಕೆಟ್ ಮರುಪರಿಶೀಲನೆಗೆ ದಿಲ್ಲಿ ಹೈಕೋರ್ಟ್ ಆದೇಶ
ಹೊಸದಿಲ್ಲಿ, ಮಾ.29: ಶೀಘ್ರದಲ್ಲೇ ಬಿಡುಗಡೆಯಾಗಲಿರುವ ‘ಸಂತಾಬಂತಾ ಪ್ರೈ.ಲಿ.’ ಬಾಲಿವುಡ್ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿರುವುದನ್ನು ಮರುಪರಿಶೀಲಿಸುವಂತೆ ದಿಲ್ಲಿ ಹೈಕೋರ್ಟ್ ಮಂಗಳವಾರ ಕೇಂದ್ರೀಯ ಸೆನ್ಸಾರ್ ಮಂಡಳಿ (ಸಿಪಿಎಫ್‌ಸಿ)ಗೆ ಆದೇಶಿಸಿದೆ. ಈ ಚಿತ್ರದಲ್ಲಿ ಸಿಖ್ ಸಮುದಾಯವನ್ನು ಗೇಲಿ ಮಾಡಲಾಗಿದೆಯೆಂದು ಸಿಖ್ ಸಂಘಟನೆಯೊಂದು ಆಪಾದಿಸಿ, ನ್ಯಾಯಾಲಯದ ಮೆಟ್ಟಲೇರಿತ್ತು.
ಎಪ್ರಿಲ್ 22ರಂದು ಬಿಡುಗಡೆಯಾಗಲಿರುವ ‘ಸಂತಾಬಂತಾ ಪ್ರೈ.ಲಿ.’ ಸಿಖ್ ಸಮುದಾಯವನ್ನು ಅಪಹಾಸ್ಯ ಮಾಡಿರುವುದು, ಭಾರೀ ಅಶಾಂತಿಗೆ ಕಾರಣವಾಗುವ ಸಾಧ್ಯತೆಯಿದೆಯೆಂದು ದಿಲ್ಲಿ ಸಿಖ್ ಗುರುದ್ವಾರ ಆಡಳಿತ ಸಮಿತಿ (ಡಿಎಸ್‌ಜಿಎಂಸಿ) ಸಲ್ಲಿಸಿರುವ ಮನವಿಯನ್ನು ಪರಿಶೀಲಿಸುವಂತೆ ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶೆ ಜಿ.ರೋಹಿಣಿ ಹಾಗೂ ನ್ಯಾಯಮೂರ್ತಿ ಜಯಂತ್ ನಾಥ್ ಅವರನ್ನೊಳಗೊಂಡ ನ್ಯಾಯಪೀಠ ಸಿಪಿಎಫ್‌ಸಿಗೆ ತಿಳಿಸಿದೆ.
ಸಿನೆಮಾಟೋಗ್ರಫ್ ಕಾಯ್ದೆಯ ನಿಯಮಾವಳಿಗಳ ಹಿನ್ನೆಲೆಯಲ್ಲಿ ಅರ್ಜಿದಾರರು ಎತ್ತಿದ ಆಕ್ಷೇಪಗಳ ಬಗ್ಗೆ ಪರಿಶೀಲನೆ ನಡೆಸುವಂತೆ ನ್ಯಾಯಪೀಠ ಸಿಬಿಎಫ್‌ಸಿಗೆ ಸೂಚಿಸಿದೆ. ಸಿಖ್ ಸಮುದಾಯದ ಬಗ್ಗೆ ಪೂರ್ವಾಗ್ರಹಪೀಡಿತವಾದ ಅಂಶಗಳನ್ನು ಈ ಚಿತ್ರವು ಒಳಗೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಸೆನ್ಸಾರ್ ಮಂಡಳಿ ನಿರ್ಧರಿಸಬೇಕೆಂದು ಅದು ಹೇಳಿದೆ.
ಅರ್ಜಿದಾರರು ಮಾಡಿರುವ ಆರೋಪಗಳ ಬಗ್ಗೆ ಎರಡು ದಿನಗಳೊಳಗೆ ಉತ್ತರಿಸುವಂತೆ ನ್ಯಾಯಾಲಯವು ‘ಸಂತಾಬಂತಾ ಪ್ರೈ.ಲಿ.’ ಚಿತ್ರದ ನಿರ್ಮಾಪಕ, ವಿತರಕ ಹಾಗೂ ನಿರ್ದೇಶಕರಿಗೆ ಸೂಚನೆ ನೀಡಿದೆ. ಇತ್ತಂಡಗಳ ಅಹವಾಲುಗಳನ್ನು ಸಿಬಿಎಫ್‌ಸಿ ಆಲಿಸಿ, ಎಪ್ರಿಲ್ 8ಕ್ಕೆ ಮೊದಲು ಸೂಕ್ತ ಆದೇಶವೊಂದನ್ನು ಜಾರಿಗೊಳಿಸುವಂತೆ ನ್ಯಾಯಾಲಯ ತಿಳಿಸಿದೆ.
ಚಿತ್ರದ ಬಿಡುಗಡೆಯ ವಿರುದ್ಧ ಡಿಎಸ್‌ಜಿಎಂಸಿ ಸಲ್ಲಿಸಿದ ಅರ್ಜಿಯ ಕುರಿತ ತನ್ನ ಆದೇಶವನ್ನು ನ್ಯಾಯಾಲಯವು ಮಾರ್ಚ್ 23ಕ್ಕೆ ನಿಗದಿಪಡಿಸಿದೆ. ಈ ಮೊದಲು ನಡೆದ ಅರ್ಜಿಯ ಅಲಿಕೆಯ ವೇಳೆ ಸೆನ್ಸಾರ್ ಮಂಡಳಿಯು, ‘ಸಂತಾಬಂತಾ ಪ್ರೈ.ಲಿ.’ ಚಿತ್ರಕ್ಕೆ ಸರ್ಟಿಫಿಕೆಟ್ ನೀಡುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು ಹಾಗೂ ಆ ಚಿತ್ರದಲ್ಲಿ ಅಕ್ಷೇಪಾರ್ಹವಾದುದೇನೂ ಇಲ್ಲವೆಂದು ಅದು ಪ್ರತಿಪಾದಿಸಿತ್ತು.