ನ್ಯಾಯಕ್ಕೆ ಜಯ, ಪಕ್ಷದ್ರೋಹ ನಡೆಸಿದವರಿಗೆ ತಕ್ಕ ಶಿಕ್ಷೆ- ಕಾವು ಹೇಮನಾಥ ಶೆಟ್ಟಿ
ಪುತ್ತೂರು : ಅಧಿಕಾರದ ದುರಾಸೆಯಿಂದ ಪಕ್ಷಾಂತರ ನಿಷೇಧ ಕಾನೂನನ್ನು ಉಲ್ಲಂಘಿಸಿ ಕೆಲವೇ ದಿನಗಳ ಅಧ್ಯಕ್ಷರಾಗಿ ಪುತ್ತೂರು ನಗರಸಭೆಯ ಆಡಳಿತ ವ್ಯವಸ್ಥೆಯನ್ನು ನಿಷ್ಕ್ರೀಯಗೊಳಿಸಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದ್ದ ಹಾಗೂ ಪಕ್ಷ ಸಂಘಟನೆಯನ್ನು ಶಿಥಿಲಗೊಳಿಸುವ ಪ್ರಯತ್ನ ನಡೆಸಿ ಪಕ್ಷದ್ರೋಹವೆಸಗಿದ್ದವರಿಗೆ ತಕ್ಕ ಪ್ರತಿಫಲ ಸಿಕ್ಕಿದೆ. ನಗರಸಭಾ ಸದಸ್ಯ ಎಚ್.ಮಹಮ್ಮದ್ ಆಲಿ ಅವರ ಹೋರಾಟಕ್ಕೆ ಲಭಿಸಿದ ನ್ಯಾಯ ನಮಗೆ ಸಂತಸ ತಂದಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಅವಧಿಯ ಆರಂಭದಲ್ಲಿ ಅಧಿಕಾರದ ದುರಾಸೆಯಿಂದ ವಾಣಿಶ್ರೀಧರ್ ಅವರು ಬಿಜೆಪಿಯೊದಿಗೆ ಕೈಜೋಡಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅಧಿಕಾರ ಪಡೆದು ಪಕ್ಷಕ್ಕೆ ಮುಜುಗರ ನೀಡಿದರು. ಬಳಿಕ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು 5 ಮಂದಿ ಸದಸ್ಯರು ಬಿಜೆಪಿಯೊಂದಿಗೆ ಶಾಮೀಲಾಗಿ ಅಧಿಕಾರ ಪಡೆಯುವ ಮೂಲಕ ಪಕ್ಷಕ್ಕೆ ದ್ರೋಹ ಬಗೆದರು. ಅಧಿಕಾರಕ್ಕಾಗಿ ಬಿಜೆಪಿಗರು ಮಾನ ಮರ್ಯಾದೆ ಬಿಟ್ಟು ಜುಜುಬಿ ರಾಜಕೀಯ ಮಾಡಿದರು. ಬಿಜೆಪಿಯ ಮುಖಂಡರಾದ ಡಿ.ವಿ.ಸದಾನಂದ ಗೌಡ , ಸಂಸದ ನಳಿನ್‌ಕುಮಾರ್ ಅವರು ಅಧಿಕಾರಕ್ಕಾಗಿ ಡೊಂಬರಾಟ ನಡೆಸಿ ವಾಣಿಶ್ರೀಧರ್ ಅವರನ್ನು ಅಧ್ಯಕ್ಷೆ ಮಾಡುವ ಮೂಲಕ ಬಹುಮತ ಪಡೆದಿದ್ದ ಕಾಂಗ್ರೆಸ್‌ಗೆ ನ್ಯಾಯಯುತವಾಗಿ ಸಿಗಬೇಕಾಗಿದ್ದ ಅಧಿಕಾರವನ್ನು ತಪ್ಪಿಸಿದರು, ಬಿಜೆಪಿಯ ಪಡ್ಯಂತ್ರ ಹಾಗೂ ಕಾಂಗ್ರೆಸ್ ಮಂದಿಯ ದುರಾಸೆಯಿಂದ ಅತಂತ್ರ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದರು.
ಮೂರು ವರ್ಷದ ಹಿಂದೆ ನಡೆದಿದ್ದ ಚುನಾವಣೆಯಲ್ಲಿ 27 ಸ್ಥಾನಗಳ ಪೈಕಿ 15ರಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿತ್ತು. ತಮ್ಮ ಪಕ್ಷದ ಸರ್ಕಾರ, ಶಾಸಕರು ಇಲ್ಲದ ಸಂದರ್ಭದಲ್ಲಿಯೂ ನಾವು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದೆವು. ಬಹುಮತ ಪಡೆದಿದ್ದರೂ ಅಧಿಕಾರ ದುರಾಸೆಯ ಮಂದಿಯಿಂದಾಗಿ ಮತ್ತು ಬಿಜೆಪಿಯ ಷಡ್ಯಂತ್ರದಿಂದಾಗಿ ಮೂರು ವರ್ಷದ ಅವಧಿಯಲ್ಲಿ ಅಧಿಕಾರ ಪಡೆಯಲು ನಮಗೆ ಸಾಧ್ಯವಾಗಿಲ್ಲ. ಈ ನೋವು ನಮಗಿದೆ. ಆದರೆ ಇದೀಗ ನಮಗೆ ಹೋರಾಟದಲ್ಲಿ ಮಾತ್ರವಲ್ಲದೆ ಮೀಸಲಾತಿಯ ಆಧಾರದಲ್ಲಿ ಮುಂದೆ ನಮ್ಮ ಪಕ್ಷದವರೇ ಆದ ಜಯಂತಿ ನಾಯ್ಕೆ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದರಿಂದ ಎರಡು ರೀತಿಯ ನ್ಯಾಯ ಸಿಕ್ಕಿದೆ ಎಂದು ಅವರು ಹೇಳಿದರು.
ನಗರಸಭೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದೆ. ನಮ್ಮ ಸರ್ಕಾರ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆರಿಸಿದ್ದರೂ ಅಭಿವೃದ್ಧಿ ಪ್ರಯತ್ನಗಳು ಯಾವುದೂ ನಡೆದಿಲ್ಲ. ಮೂರು ವರ್ಷದಲ್ಲಿ ಮೂರು ಜನ ಅಧ್ಯಕ್ಷರಾಗಿದ್ದು ಬಿಟ್ಟರೆ ಸಾಧನೆ ಏನೂ ಇಲ್ಲ ಎಂದು ಆರೋಪಿಸಿದರು.
ಡೊಂಬರಾಟ ನಡೆಸಿ ಉಪಾಧ್ಯಕ್ಷ ಸ್ಥಾನ ಪಡೆದುಕೊಂಡಿರುವ ಬಿಜೆಪಿಗರು ಮಾನ ಮರ್ಯಾದೆ ಇದ್ದರೆ ಆ ಸ್ಥಾನವನ್ನು ನಮಗೆ ಬಿಟ್ಟುಕೊಟ್ಟು, ವಿರೋಧಪಕ್ಷದಲ್ಲಿ ಕುಳಿತುಕೊಳ್ಳಬೇಕು ಎಂದು ಸವಾಲು ಹಾಕಿದ ಹೇಮನಾಥ ಶೆಟ್ಟಿ ಅವರು ಕೆಟ್ಟವರನ್ನು ಹೊರಹಾಕುವ ಕೆಲಸ ಕಾನೂನಿನ ಮೂಲಕ ಆಗಿದ್ದು, ನಮ್ಮಲ್ಲಿ ಸಮರ್ಥ ಸದಸ್ಯರಿದ್ದಾರೆ. ಒಳ್ಳೆಯ ಅಧಿಕಾರ ನೀಡುತ್ತೇವೆ ಎಂದರು.
ಕಾಂಗ್ರೆಸ್‌ನೊಳಗೆ ದ್ವಿಮುಖ ನೀತಿಯ ನಾಯಕರಿದ್ದು, ನಗರಸಭೆಯ ಆಡಳಿತಕ್ಕೆ ಸಂಬಂಧಿಸಿ ನಡೆದ ಅಧಿಕಾರ ದುರಾಸೆಯ ರಾಜಕಾರಣಕ್ಕೆ ಅವರು ಕೂಡ ಕಾರಣರಾಗಿದ್ದಾರೆ. ಪಕ್ಷದಿಂದ ಉಚ್ಚಾಟಿಸಿದವರಿಗೆ ಮಣೆ ಹಾಕುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಪಕ್ಷದ ಹೈಕಮಾಂಡ್‌ಗೆ ದೂರು ಸಲ್ಲಿಸಲಾಗುವುದು ಎಂದು ಹೇಮನಾಥ ಶೆಟ್ಟಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿಯೋಜಿತ ನಗರಸಭಾಧ್ಯಕ್ಷೆ ಜಯಂತಿ ನಾಯ್ಕಿ, ಸದಸ್ಯ ಎಚ್. ಮಹಮ್ಮದ್ ಆಲಿ, ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲೋಕೇಶ್ ಹೆಗ್ಡೆ, ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷ ಲ್ಯಾನ್ಸಿಮಸ್ಕರೇನ್ಹಸ್ ಉಪಸ್ಥಿತರಿದ್ದರು.