ಇನ್‌ಪೆಕ್ಟರ್ ಶಾಂತಾರಾಮ್, ಸಬ್‌ಇನ್ಸ್‌ಪೆಕ್ಟರ್ ಭಾರತಿಗೆ ಮುಖ್ಯಮಂತ್ರಿ ಚಿನ್ನದ ಪದಕ
ಮಂಗಳೂರು, ಮಾ. 30: ಬಂದರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಾಂತಾರಾಮ್ ಕುಂದರ್ ಹಾಗೂ ಉಳ್ಳಾಲ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಭಾರತಿ ಸಹಿತ ನಾಲ್ಕು ಮಂದಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರಕಟವಾಗಿದೆ.
ನಗರದ ಮೀಸಲು ಸಶಸ್ತ್ರ ಪಡೆಯ (ಸಿಎಆರ್) ಇನ್ಸ್‌ಪೆಕ್ಟರ್ ಸಚಿನ್ ಲಾರೆನ್ಸ್ ಹಾಗೂ ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮುಹಮ್ಮದ್ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದು, ಎಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಈ ನಾಲ್ವರು ಪದಕ ಸ್ವೀಕರಿಸಲಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್‌ರವರು ಈ ನಾಲ್ವರ ಹೆಸರನ್ನು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು, ಸಿಬ್ಬಂದಿಗಳ ಸೇವಾ ಬದ್ಧತೆ ಹಾಗೂ ಅರ್ಹತೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಇನ್ಸ್‌ಪೆಕ್ಟರ್ ಶಾತಾರಾಮ್ ಬಂಟ್ವಾಳ ತಾಲೂಕಿನ ಕಾರಿಂಜದವರು. 2003ರ ಬ್ಯಾಂಚ್‌ನ ಅಧಿಕಾರಿಯಾಗಿರುವ ಇವರು ಮಡಿಕೇರಿಯಲ್ಲಿ ಪ್ರೊಬೆಷನರಿ ಸಬ್ ಇನ್ಸ್‌ಪೆಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿ ಮೈಸೂರಿನ ದವರಾಜ್ ಠಾಣೆ, ಮಂಡ್ಯದ ಅಲಗೂರು, ಮಡಿಕೇರಿ ಗ್ರಾಮಾಂತರ, ಅಲ್ಲಿಯೇ ಗುಪ್ತಚರ ವಿಭಾಗ ಮತ್ತು ತುಮಕೂರಿನ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದವರು.
ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಭಡ್ತಿಗೊಂಡು ಮಂಗಳೂರಿನ ಮೆಸ್ಕಾಂ ವಿಜಿಲೆನ್ಸ್‌ನಲ್ಲಿ ಬಳಿಕ ಕುದುರೆಮುಖ, ಮೂಡಿಗೆರೆ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ನಕ್ಸಲ್ ನಿಗ್ರಹ ಪಡೆಯಲ್ಲಿಯೂ ಕರ್ತವ್ಯ ರ್ನಿಹಿಸಿದ್ದಾರೆ. ಒಂದು ವರ್ಷದಿಂದ ಬಂದರು ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯದಲ್ಲಿದ್ದಾರೆ.
ಉಳ್ಳಾಲ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಭಾರತಿ, ಈ ಹಿಂದೆ ಮೂಡಬಿದ್ರೆ, ಪಣಂಬೂರು, ಪಾಂಡೇಶ್ವರ, ಮಂಗಳೂರು ಗ್ರಾಮಾಂತರ ಮೊದಲಾದ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ‘ಲೇಡಿ ಟೈಗರ್’ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾರೆ.
ಸಚಿನ್ ಲಾರೆನ್ಸ್ ನಗರ ಮೀಸಲು ಸಶಸ್ತ್ರ ಪಡೆಯ. ಪೊಲೀಸ್ ಇನ್ಸ್‌ಪೆಕ್ಟರ್. ಗುಲ್ಬರ್ಗದಲ್ಲಿ ಪ್ರೊಬೆಷನರಿ ಅವಧಿಯನ್ನು ಪೂರೈಸಿರುವ ಸಚಿನ್ ಲಾರೆನ್ಸ್ ಕಾರವಾರ, ಚಿಕ್ಕಮಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ 8 ತಿಂಗಳಿನಿಂದ ಮಂಗಳೂರಿನಲ್ಲಿ ಕರ್ತವ್ಯದಲ್ಲಿದ್ದಾರೆ.
ಬಜ್ಪೆ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಮುಹಮ್ಮದ್, 1992ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಕೊಲ್ಲೂರು, ಕುಂದಾಪುರ, ಮಂಗಳೂರು ಗ್ರಾಮಾಂತರ, ಕಾವೂರು, ಟ್ರಾಫಿಕ್ ಈಸ್ಟ್, ಉಳ್ಳಾಲ ಠಾಣೆಗಳಲ್ಲಿ ಮತ್ತು ಇನ್ಸ್‌ಪೆಕ್ಟರ್ ವಿನಯ್ ಗಾಂವ್ಕರ್ ನೇತೃತ್ವದ ರೌಡಿ ನಿಗ್ರಹ ದಳದಲ್ಲಿ ಕರ್ತವ್ಯ ನಿರ್ವಹಿಸಿದವರು. ಕಳೆದ ಒಂದು ವರ್ಷದಿಂದ ಬಜ್ಪೆ ಠಾಣೆಯಲ್ಲಿ ಕರ್ತರ್ವ ನಿರ್ವಹಿಸುತ್ತಿದ್ದಾರೆ.