×
Ad

ಉಪ್ಪಿನಂಗಡಿ: ಪಂಚಾಯತ್‌ನ ಕುಡಿಯುವ ನೀರನ್ನು ಪೋಲು ಮಾಡಿದರೆ ನಿರ್ದಾಕ್ಷಿಣ ಕ್ರಮ - ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್

Update: 2016-03-30 17:37 IST

ಉಪ್ಪಿನಂಗಡಿ: ಪಂಚಾಯತ್‌ನ ಕುಡಿಯುವ ನೀರನ್ನು ಪೋಲು ಮಾಡುವುದು ಹಾಗೂ ಮಲಿನ ನೀರನ್ನು ಸಾರ್ವಜನಿಕ ಚರಂಡಿಗೆ ಬಿಡುವುದು ಕಂಡು ಬಂದರೆ ಅಂಥವರ ಮೇಲೆ ನಿರ್ದಾಕ್ಷಿಣ ಕ್ರಮ ಕೈಗೊಳ್ಳುವುದಾಗಿ ಉಪ್ಪಿನಂಗಡಿ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ತಿಳಿಸಿದ್ದಾರೆ.

 ಇಲ್ಲಿನ ಪಂಚಾಯತ್ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚಾಯತ್‌ನ ಕುಡಿಯುವ ನೀರನ್ನು ಹಲವರು ಕೃಷಿ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಬಳಸುವುದು ಕಂಡು ಬಂದಿದೆ. ಗ್ರಾಮದಲ್ಲಿ ಕುಡಿಯುವ ನೀರಿಗೆ ತಾತ್ವಾರವಿದ್ದು, ಆದ್ದರಿಂದ ಕುಡಿಯುವ ನೀರನ್ನು ದುರುಪಯೋಗಪಡಿಸುವುದು ಸರಿಯಲ್ಲ. ಎಪ್ರಿಲ್ 1ರ ಬಳಿಕ ಕುಡಿಯುವ ನೀರನ್ನು ದುರುಪಯೋಗಪಡಿಸುವುದು ಕಂಡು ಬಂದಲ್ಲಿ ಅಂಥವರ ಮೇಲೆ ನಿರ್ದಾಕ್ಷಿಣ ಕ್ರಮ ಕೈಗೊಳ್ಳಲಾಗುವುದು. ಅಂಥವರ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು. ಕಡಿತಗೊಳಿಸಿದ್ದಕ್ಕೆ 200 ರೂಪಾಯಿ, ಮರು ಜೋಡಣೆಗೆ 300 ರೂಪಾಯಿ ಹಾಗೂ ದಂಡವನ್ನು ಅವರಿಂದ ವಸೂಲಿ ಮಾಡಲಾಗುವುದು ಎಂದರು. ಅಲ್ಲದೆ, ಮಲೀನ ನೀರನ್ನು ಪಂಚಾಯತ್ ಚರಂಡಿಗೆ ಬಿಡುವವರ ಮೇಲೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರಲ್ಲದೇ, ಈ ಬಾರಿ ಮಾರ್ಚ್ ಅಂತ್ಯಕ್ಕೆ ಶೇ.75ರಷ್ಟು ತೆರಿಗೆ ವಸೂಲಿಯಾಗಿದ್ದು, ಇದು ಪಂಚಾಯತ್ ಇತಿಹಾಸದಲ್ಲಿ ಪ್ರಥಮ ಎಂದರು.

ಪಟ್ಟಣದಲ್ಲಿ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡ ತೆರಿಗೆಗೆ ಒಂದೇ ನಿಯಮ ಬೇಡ. ಗ್ರಾಮಾಂತರ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳು ಕಡಿಮೆ ಬಾಡಿಗೆಗೆ ಹೋಗುವುದರಿಂದ ಅಂತಹ ಪ್ರದೇಶದಲ್ಲಿರುವ ವಾಣಿಜ್ಯ ಕಟ್ಟಡಗಳ ಬಾಡಿಗೆಗಳನ್ನು ಪರಿಷ್ಕರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಪಟ್ಟಣದಲ್ಲಿ ಆಕ್ರಮಿತ ಚರಂಡಿ ಹಾಗೂ ಫುಟ್‌ಪಾತ್ ತೆರವಿಗೆ ಎಪ್ರಿಲ್ 1ರ ಗಡುವು ನೀಡಲಾಯಿತು. ಕುಡಿಯುವ ನೀರಿನ ಬಿಲ್‌ಗಳನ್ನು ಮೂರು ತಿಂಗಳೊಳಗೆ ಕಟ್ಟಲು ಹಾಗೂ ಬಿಲ್ ಬಾರದಿದ್ದಲ್ಲಿ ಪಂಚಾಯತ್‌ನಲ್ಲಿ ಬಂದು ವಿಚಾರಿಸಿ ಕಟ್ಟಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಲ್ಲಿನ ಪುಳಿತ್ತಡಿ ಸರಕಾರಿ ಶಾಲೆ ಬಳಿ ಇರು ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಿರುವಾಗಿದ್ದು, ಇಲ್ಲಿ ಅತೀ ಹೆಚ್ಚು ಅಪಘಾತಗಳು ನಡೆಯುತ್ತಿವೆ.. ಶಾಲಾ ಮಕ್ಕಳಿಗೂ ಅಪಾಯವೊದಗುವ ಸಂಭವ ಇದೆ. ಆದ್ದರಿಂದ ಇಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕು ಎಂದು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲು ಪಂಚಾಯತ್ ನಿರ್ಣಯಿಸಿತು. ಅಲ್ಲದೇ, ಪಟ್ಟಣಕ್ಕೆ ಟ್ರಾಪಿಕ್ ಪೊಲೀಸ್ ಒದಗಿಸಲು ಪೊಲೀಸ್ ಇಲಾಖೆಗೆ ಮನವಿ ನೀಡಲು ತೀರ್ಮಾನಿಸಲಾಯಿತು ಹಾಗೂ ನದಿ ಬದಿ ನಿರ್ಮಿಸುವ ಇಂಗುಗುಂಡಿಗಳನ್ನು ತಕ್ಷಣವೇ ಮುಚ್ಚುವಂತೆ ನಿರ್ಣಯ ಕೈಗೊಳ್ಳಲಾಯಿತು.

ಪ್ರತಿಭಟನಾ ನಿರ್ಣಯ: ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲು ಮಾತನಾಡಿ, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ಆಯ್ಕೆ ನಡೆದು ತಿಂಗಳಾದರೂ ಅಧ್ಯಕ್ಷ- ಉಪಾಧ್ಯಕ್ಷರಿಗಾಗಿ ಮೀಸಲಾತಿ ಇನ್ನೂ ಪ್ರಕಟವಾಗಿಲ್ಲ. ಆದ್ದರಿಂದ ನೂತನ ಆಡಳಿತ ಜಾರಿಗೆ ಬರದೆ ಯಾವುದೇ ಅನುದಾನಗಳು ಬಿಡುಗಡೆಯಾಗುತ್ತಿಲ್ಲ. ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ರಾಜ್ಯ ಸರ್ಕಾರದ ನಿರ್ಲಕ್ಷ್ಯದ ನೇರ ಪರಿಣಾಮ ಅಭಿವೃದ್ಧಿ ಮೇಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರ ಪ್ರತಿಭಟನಾ ನಿರ್ಣಯವನ್ನು ರಾಜ್ಯ ಸರಕಾರಕ್ಕೆ ಕಳುಹಿಸಬೇಕೆಂದರು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸದಸ್ಯರಾದ ಸುರೇಶ್ ಅತ್ರಮಜಲು, ಸುನೀಲ್ ದಡ್ಡು, ಯು.ಟಿ. ತೌಸೀಫ್, ಉಮೇಶ್ ಗೌಡ, ಚಂದ್ರಶೇಖರ ಮಡಿವಾಳ, ಭಾರತಿ, ಝರೀನಾ, ಚಂದ್ರಾವತಿ, ಸುಶೀಲಾ, ಜಮೀಳಾ, ಯೊಗೀನಿ, ರಮೇಶ್ ಬಂಡಾರಿ ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಅಸಾಫ್ ಅರ್ಜಿಗಳನ್ನು ವಿಲೇವಾರಿಗೊಳಿಸಿದರು. ಕಾರ್ಯದರ್ಶಿ ಕೀರ್ತಿಪ್ರಸಾದ್ ಸ್ವಾಗತಿಸಿ, ವಂದಿಸಿದರು. 

'ಮರಳು ತೆಗೆಯಲು ಪರಮಾಧಿಕಾರ ನೀಡಿ'

ರಾಜ್ಯ ಸರ್ಕಾರದ ನೀತಿಯಿಂದಾಗಿ ಜನಸಾಮಾನ್ಯರಿಗೆ ಮರಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಮರಳು ಅಕ್ರಮ ದಂಧೆಯ ಮೂಲಕ ಬೆಂಗಳೂರು, ಮೈಸೂರಿನಂತಹ ಮಹಾನಗರಗಳನ್ನು ಸೇರುತ್ತಿವೆ. ಆದ್ದರಿಂದ ಮರಳು ತೆಗೆಯಲು ಲೋಕೋಪಯೋಗಿ ಇಲಾಖೆಗೆ ಅಧಿಕಾರ ನೀಡದೆ, ಮೊದಲಿದ್ದ ಹಾಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಡಿ ಒಪ್ಪಿಸಲಿ ಹಾಗೂ ಮರಳು ತೆಗೆಯುವುದಕ್ಕೆ ಸ್ಥಳೀಯ ಪಂಚಾಯತ್‌ಗಳಿಗೆ ಪರಮಾಧಿಕಾರ ನೀಡಲಿ. ಮರಳು ತೆಗೆಯಲು ಸ್ಥಳೀಯ ಪಂಚಾಯತ್‌ನ ಒಪ್ಪಿಗೆ ಅತೀ ಅಗತ್ಯವೆನ್ನುವ ನಿಯಮವನ್ನು ರೂಪಿಸಲಿ ಎಂದು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಗ್ರಹ ಕೇಳಿ ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News