×
Ad

ಎನ್‌ಪಿಎಸ್ ಯೋಜನೆಗೆ ವಿರೋಧ-ಡಿಪಿಎಸ್ ಯೋಜನೆ ಜಾರಿಗೆ ಆಗ್ರಹ

Update: 2016-03-30 17:45 IST

ಪುತ್ತೂರು: 2006ರ ನಂತರ ನೇಮಕಗೊಂಡಿರುವ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರಿಗಾಗಿ ಜಾರಿಗೊಳಸಲಾಗಿದ್ದ ನಿಶ್ಚಿತ ಪಿಂಚಣಿ ಯೋಜನೆಯನ್ನು (ಡಿಪಿಎಸ್) ರದ್ದುಗೊಳಿಸಿ ವಂತಿಗೆ ಆಧಾರಿತ ನಿಗದಿತ ವಂತಿಗೆ ಪಿಂಚಣಿ ( ನ್ಯಾಷನಲ್ ಪೆನ್ಶನ್ ಸ್ಕೀಂ) ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯು ಸರ್ಕಾರಿ ನೌಕರ ಹಾಗೂ ಅವರನ್ನು ಅವಲಂಬಿತ ಕುಟುಂಬಗಳಿಗೆ ಮಾರಕವಾಗಿದೆ, ಇದನ್ನು ವಿರೋಧಿಸಿ ಏ. 1ರಂದು ಕಪ್ಪುಪಟ್ಟಿ ಧರಸಿ ಕರ್ತವ್ಯ ನಿರ್ವಹಿಸುವ ಮೂಲಕ ಕರಾಳ ದಿನ ಆಚರಿಸಲಾಗುವುದು. ಕಾಯಿದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗೆ ಕಾರ್ಡ್ ಚಳುವಳಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಇಬ್ರಾಹಿಂ ಅವರು ತಿಳಿಸಿದರು.

ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎನ್.ಪಿ.ಎಸ್ ಯೋಜನೆಯಿಂದಾಗಿ ಸರ್ಕಾರಿ ನೌಕರರು ನಿವೃತ್ತಿಯ ಬಳಿಕ ಸರ್ಕಾರದಿಂದ ಪಿಂಚಣಿ ಪಡೆಯುವ ಬದಲು ಖಾಸಗಿ ಕಂಪನಿಗಳ ಮ್ಯೂಚುವಲ್ ಫಂಡ್ ಮೂಲಕ ಮಾರುಕಟ್ಟೆ ಆಧರಿತ ಲಾಭದ ಅಡಿಯಲ್ಲಿ ಪಿಂಚಣಿ ಪಡೆಯಲಿದ್ದಾರೆ. ಈ ಯೋಜನೆ ಹೊಸದಾಗಿ ನೇಮಕಗೊಂಡ ನೌಕರರ ನಿವೃತ್ತಿ ಜೀವನಕ್ಕೆ ಆಘಾತ ತರುವಂತಿದೆ ಎಂದ ಅವರು ಎನ್‌ಪಿಎಸ್ ಯೊಜನೆ ರದ್ದುಪಡಿಸಬೇಕು. ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಮರಣ ಹೊಂದಿರುವ ಎನ್‌ಪಿಎಸ್ ನೌಕರರ ಅವಲಂಬಿತರಿಗೆ ಹಿಂದಿನ ಯೋಜನೆಯ ಸವಲತ್ತುಗಳನ್ನೇ ನೀಡಬೇಕು,  ಪಿಎಫ್‌ಆರ್‌ಡಿಎ ಕಾಯಿದೆಯನ್ನು ಕೇಂದ್ರ ಸರಕಾರ ವಾಪಸ್ ಪಡೆಯಬೇಕು ಎಂಬುವುದು ನಮ್ಮ ಬೇಡಿಕೆಯಾಗಿದೆ ಎಂದರು.

  ಹೊಸ ಪಿಂಚಣಿ ಯೋಜನೆಯನ್ನು 2004 ಎ.1ರಂದು ಜಾರಿಗೊಳಿಸಲಾಗಿದ್ದು, ಮುಂಬರುವ ಎ.1ಕ್ಕೆ 10 ವರ್ಷ ಆಯಿತು. ಮಾಹಿತಿ ಕೊರತೆಯಿಂದ ಹೋರಾಟಕ್ಕೆ ವಿಳಂಬವಾಯಿತು. ಹೋರಾಟದ ಉದ್ದೇಶದಿಂದಲೇ ಸರ್ಕಾರಿ ಎನ್‌ಪಿಎಸ್ ಸರ್ಕಾರಿ ನೌಕರರ ಸಂಘ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಯೋಜನೆ ಜಾರಿಗೆ ಬಂದಾಗ ನೌಕರರಿಗೆ ನಿವೃತ್ತಿಯ ಬಳಿಕ ದೊಡ್ಡ ಮೊತ್ತದ ಪಿಂಚಣಿ ಸಿಗಲಿದೆ ಎಂದು ನಂಬಿಸಲಾಗಿತ್ತು. ಆದರೆ ಕಳೆದ 10 ವರ್ಷದಲ್ಲಿ ಇದರ ಸಾಚಾತನ ಬಯಲಾಗಿದೆ. 2006ಕ್ಕಿಂತ ಹಿಂದಿನ ನೌಕರರಿಗೆ ಸಿಗುವ ಪಿಂಚಣಿಯ ಐದರಲ್ಲಿ ಒಂದು ಪಾಲು ಕೂಡ ಎನ್‌ಪಿಎಸ್ ಅಡಿಯಲ್ಲಿ ಸಿಗುವ ಭರವಸೆ ಈಗ ಇಲ್ಲ. ಇದಕ್ಕಾಗಿ ನಾವೀಗ ಹೋರಾಟಕ್ಕಿಳಿದಿದ್ದೇವೆ. ಸರ್ಕಾರಿ ನೌಕರರಲ್ಲೇ ಎನ್‌ಪಿಎಸ್ ಯೋಜನೆಗೆ ಒಳಪಡುವವರನ್ನು ಸೇರಿಸಿಕೊಂಡು ಸಂಘಟನೆ ಕಟ್ಟಿಕೊಂಡಿದ್ದೇವೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟು 1983ರ ಆದೇಶದಲ್ಲಿ ಪಿಂಚಣಿ ಎನ್ನುವುದು ನೌಕರರಿಗೆ ನೀಡುವ ಭಿಕ್ಷೆಯಲ್ಲ. ನೌಕರರು ದೀರ್ಘಾವಧಿಗೆ ಮಾಡಿದ ಸೇವೆ ಹಾಗೂ ಸೇವಾವಧಿಯಲ್ಲಿ ನೌಕರನು ಪಡೆದ ಜೀವನಾವಶ್ಯಕ ವೇತನಕ್ಕಿಂತ ಕಡಿಮೆ ವೇತನ ಇದನ್ನು ಗಮನಿಸಿ ಪಿಂಚಣಿ ರೂಪದಲ್ಲಿ ಇಳಿವಯಸ್ಸಿನ ಸಾಮಾಜಿಕ ಆರ್ಥಿಕ ಭದ್ರತೆಗಾಗಿ ನೀಡುವಂತಹದ್ದು. ಇದನ್ನು ಹಕ್ಕಿನಂಶದ ಹಣ ಎಂದು ಪರಿಗಣಿಸಬೇಕೆಂದು ಸೂಚಿಸಿದೆ ಎಂದವರು ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದ ಸಂಚಾಲಕ ಕ್ಯಾತಲಿಂಗ ಸಿದ್ರಾಮ ಕ್ಯಾತನವರ , ಜಿಲ್ಲಾ ಘಟಕದ ಕಾರ್ಯದರ್ಶಿ ಆದರ್ಶ, ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ದಿನೇಶ್ ಮಾಚಾರ್, ಬೆಳ್ತಂಗಡಿ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್, ಬಂಟ್ವಾಳ ತಾಲ್ಲೂಕು ಘಟಕದ ಉಪಾಧ್ಯಕ್ಷೆ ನೀತಾ ಗಟ್ಟಿ ಹಾಜರಿದ್ದರು.

ಸಂಘದ ಪ್ರಮುಖ ಬೇಡಿಕೆಗಳು

* ಎನ್‌ಪಿಎಸ್ ಯೊಜನೆ ರದ್ದುಪಡಿಸಬೇಕು.

* ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತರಬೇಕು.

* ಮರಣ ಹೊಂದಿರುವ ಎನ್‌ಪಿಎಸ್ ನೌಕರರ ಅವಲಂಬಿತರಿಗೆ ಹಿಂದಿನ ಯೋಜನೆಯ ಸವಲತ್ತುಗಳನ್ನೇ ನೀಡಬೇಕು.

* ಪಿಎಫ್‌ಆರ್‌ಡಿಎ ಕಾಯಿದೆಯನ್ನು ಕೇಂದ್ರ ಸರಕಾರ ವಾಪಸ್ ಪಡೆಯಬೇಕು.

ಎನ್‌ಪಿಎಸ್ ಎಂದರೇನು...?

* ಕೇಂದ್ರ ಸರಕಾರ 2004ರಲ್ಲಿ ಮತ್ತು ರಾಜ್ಯ ಸರಕಾರ 2006ರಲ್ಲಿ ಜಾರಿಗೆ ತಂದಿರುವ ಯೋಜನೆ ಇದು. ಡಿಫೈನ್‌ಡ್ ಪೆನ್ಶನ್ ಸ್ಕೀಮ್ (ಡಿಪಿಎಸ್) ಎಂಬುದು ಇದರ ಹೆಸರು. ಇದಕ್ಕಿರುವ ಮತ್ತೊಂದು ಹೆಸರು ಎನ್‌ಪಿಎಸ್(ನ್ಯಾಶನಲ್ ಪೆನ್ಶನ್ ಸ್ಕೀಂ.)

* 2006ರ ನಂತರ ನೇಮಕಗೊಂಡ ಎಲ್ಲ ಸರಕಾರಿ ನೌಕರರಿಗೂ ಈ ಪಿಂಚಣಿ ಯೋಜನೆ ಅನ್ವಯ.

* ಇದಲ್ಲಿ ನೌಕರನ ಸಂಬಳದ ಶೇ.10ರಷ್ಟನ್ನು ಪ್ರತೀ ತಿಂಗಳು ವಂತಿಗೆ ನೀಡಬೇಕು. ಅದನ್ನು ಖಾಸಗಿ ಕಂಪನಿಗಳ ಮ್ಯೂಚುವಲ್ ಫಂಡ್‌ನಲ್ಲಿ ಹೂಡಲಾಗುತ್ತದೆ. ನಿವೃತ್ತಿ ನಂತರ ಆಗಿನ ಶೇರು ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಖಾಸಗಿ ಕಂಪನಿಯಿಂದ ಸರಕಾರಿ ನೌಕರರು ಪಿಂಚಣಿ ಪಡೆಯಬೇಕು.

* ಇಷ್ಟೇ ಮೊತ್ತದ ಪಿಂಚಣಿ ಸಿಗುತ್ತದೆ ಎಂಬ ಯಾವ ಖಾತ್ರಿಯೂ ಇಲ್ಲ. ಅದೆಲ್ಲ ಶೇರು ಮಾರುಕಟ್ಟೆ ಮೇಲೆ ಅವಲಂಬಿತ.

* ನಿವೃತ್ತಿಯಾದ ಬಳಿಕ ಆ ಮೊತ್ತದ 60 ಶೇಕಡಾವನ್ನು ಒಮ್ಮೆಲೇ ನೀಡಲಾಗುತ್ತದೆ. ಉಳಿದ ಹಣವನ್ನು ಮಾಸಿಕ ಕಂತುಗಳಲ್ಲಿ ನೀಡಲಾಗುತ್ತದೆ.

* ಪ್ರಸ್ತುತ ದ.ಕ. ಜಿಲ್ಲೆಯಲ್ಲಿ 4 ಸಾವಿರ, ರಾಜ್ಯದಲ್ಲಿ 151000 ನೌಕರರು ಎನ್‌ಪಿಎಸ್ ವ್ಯಾಪ್ತಿಗೆ ಬರುತ್ತಾರೆ.

* ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ 700 ಸಿಬ್ಬಂದಿಗಳು ಸೇವೆಯಲ್ಲಿದ್ದಾಗಲೇ ಮೃತಪಟ್ಟಿದ್ದು, ಪಿಂಚಣಿಯಿಂದ ವಂಚಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News