ಮಂಗಳೂರು :ಅನುದಾನಿತ ಶಾಲೆಗಳನ್ನು ಮುಚ್ಚಲು ಸರಕಾರ ಯತ್ನಿಸುತ್ತಿದೆ- ಎಂ.ಜಯಾನಂದ ದೇವಾಡಿಗ ಆಕ್ರೋಶ
ಮಂಗಳೂರು, ಮಾ. 27: 9 ನೇ ತರಗತಿಯಲ್ಲಿ 25 ವಿದ್ಯಾರ್ಥಿಗಳಿಲ್ಲದಿದ್ದರೆ ಹತ್ತನೆ ತರಗತಿಗೆ ದಾಖಲಿಸುವಂತಿಲ್ಲ ಎಂಬ ನಿಯಮ ಸೇರಿದಂತೆ ವಿವಿಧ ನಿಯಾಮಾವಳಿಗಳನ್ನು ಹೇರುವ ಮೂಲಕ ಅನುದಾನಿತ ಶಾಲೆಗಳನ್ನು ಮುಚ್ಚಲು ಸರಕಾರ ಯತ್ನಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅನುದಾನಿತ ಶಾಲೆಗಳ ಆಡಳಿತದವರ ಸಂಘದ ಕಾರ್ಯದರ್ಶಿ ಎಂ.ಜಯಾನಂದ ದೇವಾಡಿಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2016-17ನೇ ಶೈಕ್ಷಣಿಕ ವರ್ಷದಿಂದ 9ನೇ ತರಗತಿಯಲ್ಲಿ 25 ಮಕ್ಕಳಿಲ್ಲದಿದ್ದಲ್ಲಿ 10ನೇ ತರಗತಿಯನ್ನು ತೆರೆಯಬಾರದು ಎಂದು ಒತ್ತಡ ಹೇರಲಾಗುತ್ತಿದೆ. ಒಂದೆಡೆ ಇಲಾಖಾ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಹಲವು ವರ್ಷಗಳಿಂದ ಶಿಕ್ಷಣ ಸೇವೆ ನೀಡುತ್ತಿರುವ ಶಾಲೆಗಳಿಗೆ ಇಂತಹ ನಿರ್ಬಂಧ ಹೇರುವುದು ಸರಿಯಲ್ಲ ಎಂದವರು ಹೇಳಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 160ರಷ್ಟು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿವೆ. ಕೆಲವು ಶಾಲೆಗಳು ನೂರಾರು ವರ್ಷಗಳ ಇತಿಹಾಸ ಹೊಂದಿವೆ. ವಿದ್ಯಾಭಿಮಾನಿ ಸಾರ್ವಜನಿಕರಿಂದ ಸ್ಥಾಪಿಸಲ್ಪಟ್ಟು ಸೇವೆ ಸಲ್ಲಿಸುತ್ತಾ ಬಂದಿರುವ ಈ ಶಾಲೆಗಳನ್ನು ಪ್ರಸ್ತುತ ಸರಕಾರ ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರ ನಡೆಸುತ್ತಿದೆ. ಸರಕಾರ ಅನುದಾನಿತ ಶಾಲೆಗಳಲ್ಲಿನ ಮಕ್ಕಳಿಗೆ, ಶಿಕ್ಷಕರಿಗೆ ನೀಡುವ ಸವಲತ್ತುಗಳ ಬಗ್ಗೆ ಪ್ರಾರಂಭದಿಂದಲೂ ತಾರತಮ್ಯ ಮಾಡುತ್ತಾ ಬಂದಿದೆ. ಶಿಕ್ಷಕರು ಮತ್ತು ಶಿಕ್ಷಕೇತರ ಹುದ್ದೆಗಳ ಖಾಲಿಬಿದ್ದರೆ ಹೊಸಬರನ್ನು ನೇಮಿಸಲು ಅವಕಾಶ ನೀಡುತ್ತಿಲ್ಲ. ಶಾಲೆಗಳ ನಿರ್ವಹಣೆಗೆ ಅನುದಾನ ನೀಡುತ್ತಿಲ್ಲ.ಸರಕಾರ ನಿರ್ಬಂಧಗಳನ್ನು ಹಿಂಪಡೆದು ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದಲ್ಲಿ ಹೋರಾಟ ಅನಿವಾರ್ಯವಾದೀತು ಎಂದವರು ಎಚ್ಚರಿಸಿದರು.ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಸರಕಾರ ಅಧ್ಯಾಪಕರನ್ನು ನಿಯೋಜಿಸಬೇಕು. ಈಗಾಗಲೇ ಹೇರಿರುವ ಕೆಲವು ನಿರ್ಬಂಧಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪಿ.ಗೋಪಾಲಕೃಷ್ಣ ಭಟ್, ಉಪಾಧ್ಯಕ್ಷ ಬಿ.ವರದರಾಜ ಅಡ್ಯಂತಾಯ, ಗೋವಿಂದ ಶೆಣೈ, ಎಸ್.ಎಸ್.ಸಾಲಿನ್ಸ್ ಉಪಸ್ಥಿತರಿದ್ದರು.