×
Ad

ಪುತ್ತೂರು: ಮದ್ಯದಂಗಡಿ ಕೆಲಸಗಾರರ ಮೇಲೆ ಹಲ್ಲೆ, ಆದೂರು ಠಾಣಾ ಪೊಲೀಸರ ವಿರುದ್ಧ ಪ್ರಕರಣ ದಾಖಲು

Update: 2016-03-30 20:21 IST

ಪುತ್ತೂರು: ಪುತ್ತೂರು ತಾಲೂಕಿನ ಗಡಿಭಾಗದಲ್ಲಿರುವ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖ ಎಂಬಲ್ಲಿರುವ ಮದ್ಯದಂಗಡಿಗೆ ಬಂದು ಅಲ್ಲಿನ ಕೆಲಸಗಾರರಾದ ಶಶಿಧರ, ಮಂಜುನಾಥ ಮತ್ತು ಯಶವಂತ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಕಾಸರಗೋಡು ತಾಲೂಕು ಆದೂರು ಪೊಲೀಸ್ ಠಾಣಾ ಸಬ್‌ಇನ್‌ಸ್ಪೆಕ್ಟರ್ ಸಂತೋಷ್ ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನಾ ಕಾರಣ ಆದೂರು ಪೊಲೀಸರು ತಮ್ಮ ಠಾಣಾ ವ್ಯಾಪ್ತಿ ಮೀರಿ ಕಾರ್ಯಾಚರಣೆ ನಡೆಸಿ ಮದ್ಯದಂಗಡಿಯ ಕೆಲಸಗಾರರಾದ ಮೂವರ ಮೇಲೆ ಹಲ್ಲೆ ನಡೆಸಿ ಇಬ್ಬರನ್ನು ಆದೂರು ಠಾಣೆಗೆ ಕರೆದೊಯ್ದಿರುವುದಾಗಿ ಆರೋಪ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಯಶವಂತ ಅವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಪೊಲೀಸರ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಮದ್ಯದಂಗಡಿಯ ಮಾಲಕ ಎಸ್.ಬಿ. ಜಯರಾಮ ರೈ ಅವರೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್.ಐ. ಮತ್ತು ಕಾನ್‌ಸ್ಟೇಬಲ್ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ. ಈ ನಡುವೆ ಮದ್ಯದಂಗಡಿಯ ಕೆಲಸಗಾರರಾದ ಶಶಿಧರ ಮತ್ತು ಮಂಜುನಾಥನನ್ನು ಆದೂರು ಪೊಲೀಸರು ತಮ್ಮ ಠಾಣೆಗೆ ಕರೆದೊಯ್ದು ಪೊಲೀಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಶಶಿಧರ ಮತ್ತು ಮಂಜುನಾಥನಿಗೆ ಕಾಸರಗೋಡು ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News