ಆಕಾಶ್ ಸಾಕು-ಇಸ್ರೇಲಿ ಕ್ಷಿಪಣಿ ಬೇಕು: ಭೂ ಸೇನೆ
ಹೊಸದಿಲ್ಲಿ, ಮಾ.30: ಒತ್ತಾಯದಿಂದ ಹೇರಲಾಗಿದ್ದ ಸ್ವದೇಶಿ ನಿರ್ಮಿತ ಆಕಾಶ್ ಕ್ಷಿಪಣಿಗಳ ನಿಯೋಜನೆ ಮುಂದುವರಿಕೆಯನ್ನು ದೃಢವಾಗಿ ತಿರಸ್ಕರಿಸಿರುವ ಭೂಸೇನೆಯು, ವೈರಿಗಳ ಯುದ್ಧವಿಮಾನ, ಹೆಲಿಕಾಪ್ಟರ್ ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸಲು, ಇಸ್ರೇಲ್ ನಿರ್ಮಿತ ತ್ವರಿತ ಪ್ರತಿಕ್ರಿಯೆಯ ನೆಲದಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿಗಳಿಗೆ (ಕ್ಯೂಆರ್ ಎಸ್‌ಎಎಂ) ಬೇಡಿಕೆ ಮಂಡಿಸುವ ನಿರೀಕ್ಷೆಯಿದೆ.
ಇಸ್ರೇಲ್‌ನಿಂದ 14,180 ಕೋಟಿ ರೂ.ವೆಚ್ಚದಲ್ಲಿ ಆರು ಫೈರಿಂಗ್ ಬ್ಯಾಟರೀಸ್ ಹಾಗೂ ಕ್ಷಿಪಣಿಗಳನ್ನು ಈ ಮೊದಲು ಪಡೆದಿರುವುದರಿಂದ ಇನ್ನಷ್ಟು ಆಕಾಶ್ ರೆಜಿಮೆಂಟ್‌ಗಳ ಅಗತ್ಯವಿಲ್ಲವೆಂದು ಭೂಸೇನೆ ಸ್ಪಷ್ಟಪಡಿಸಿದೆಯೆಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಇದು ‘ಮೇಕ್ ಇನ್ ಇಂಡಿಯಾ’ ನೀತಿಗೆ ದೊಡ್ಡ ಆಘಾತ ನೀಡಿದೆ. ನೌಕಾಪಡೆಯು ಈಗಾಗಲೇ, ‘ಸ್ಥಿರೀಕರಣ ಸಮಸ್ಯೆಯಿಂದಾಗಿ’ ತನ್ನ ಸಮರ ನೌಕೆಗಳಿಗೆ ಇನ್ನಷ್ಟು ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸಲು ನಿರಾಕರಿಸಿದ್ದು, ಅಂತಹ ಅಗತ್ಯಗಳಿಗಾಗಿ ಫ್ರಾನ್ಸ್‌ನತ್ತ ಮುಖ ಮಾಡಿದೆ.
ಆಕಾಶ್ ಪ್ರಾದೇಶಿಕ ರಕ್ಷಣಾ ಕ್ಷಿಪಣಿ ವ್ಯವಸ್ಥೆಯು, ಮುಂಚೂಣಿ ನೆಲೆಗಳಲ್ಲಿ ವೈರಿಗಳ ವಾಯುದಾಳಿಯ ವಿರುದ್ಧ ದಾಳಿ ನಡೆಸುವ ತನ್ನ ಪಡೆಗಳನ್ನು ರಕ್ಷಿಸುವ ತನ್ನ ಕಾರ್ಯಾಚರಣೆಯ ಅಗತ್ಯವನ್ನು ಪೂರೈಸುವುದಿಲ್ಲವೆಂದು ಸೇನೆಯು ಪ್ರತಿಪಾದಿಸುತ್ತಿದೆ. ಅದರ ಬದಲು ಅದು 4 ಕ್ಯೂಆರ್‌ಎಸ್‌ಎಎಂ ರೆಜಿಮೆಂಟ್‌ಗಳ ಖರೀದಿಗಾಗಿ ಜಾಗತಿಕ ಮಾರ್ಗವನ್ನು ಅದು ಬಯಸುತ್ತಿದೆಯೆಂದು ಮೂಲವೊಂದು ತಿಳಿಸಿದೆ.
ಇಸ್ರೇಲ್, ರಶ್ಯ ಹಾಗೂ ಸ್ವೀಡನ್‌ಗಳ ಕ್ಷಿಪಣಿ ವ್ಯವಸ್ಥೆಗಳು ಸೇನೆಯಿಂದ ವ್ಯಾಪಕ ಪರೀಕ್ಷೆಗಳಿಗೆ ಒಳಗಾಗಿದ್ದು, ಇಸ್ರೇಲ್‌ನ ಸ್ಪೈಡರ್ ಕ್ಯೂಆರ್-ಎಸ್‌ಎಎಂಗಳು ಸ್ಪರ್ಧೆಯಲ್ಲಿ ವಿಜಯ ಗಳಿಸಿವೆಯೆಂದು ಅದು ಹೇಳಿದೆ.
ಭಾರತೀಯ ವಾಯು ಸೇನೆಯು ಫೆಬ್ರವರಿ 2017ರ ಬಳಿಕ 4 ಸ್ಪೈಡರ್ ಘಟಕಗಳನ್ನು ನಿಯೋಜಿಸುವ ಯೋಜನೆಯಲ್ಲಿ ಈಗಾಗಲೇ ಮುಂದುವರಿದಿದೆ. ಆದರೆ, ಅದು ಸುಮಾರು 10,900 ಕೋಟಿ ರೂ.ವೆಚ್ಚದಲ್ಲಿ 15 ಆಕಾಶ್ ಕ್ಷಿಪಣಿ ಸ್ಕ್ವಾಡ್ರನ್‌ಗಳನ್ನು ಪ್ರಗತಿಪರವಾಗಿ ನಿಯೋಜಿಸಿಕೊಳ್ಳಲಿದೆ. ಅವುಗಳಲ್ಲಿ 6 ಸ್ಕ್ವಾಡ್ರನ್‌ಗಳು ಈಶಾನ್ಯದಲ್ಲಿ ಈ ಮೊದಲಿನಂತೆ, ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾದ ಮಿಲಿಟರಿ ಮೂಲ ಸೌಕರ್ಯ ನಿರ್ಮಾಣವನ್ನು ಎದುರಿಸುವುದಕ್ಕಾಗಿರುತ್ತವೆ.
ಆಕಾಶ್ ಕ್ಷಿಪಣಿಯು ಸೇನೆಯು ಅಪೇಕ್ಷಿಸಿರುವಂತೆ, ಅಗತ್ಯವಿರುವ 360 ಡಿಗ್ರಿಯ ವ್ಯಾಪ್ತಿಯನ್ನಾಗಲಿ, 3-4 ಸೆಕೆಂಡ್‌ಗಳ ಪ್ರತಿಕ್ರಿಯಾ ಸಮಯವನ್ನಾಗಲಿ ಪಡೆದಿಲ್ಲ. ಅಲ್ಲದೆ ಅದರ ರಾಡಾರ್ ವ್ಯವಸ್ಥೆ ದೊಡ್ಡದಾಗಿದ್ದು, ಉಡಾವಕ ಹಾಗೂ ಬಹು ಕಾರ್ಯ ರಾಡಾರ್ ಮತ್ತಿತರ ವ್ಯವಸ್ಥೆಗಳಿಗೆ ಹಲವು ವಾಹನಗಳ ಅಗತ್ಯವಿರುತ್ತದೆಂದು ಮೂಲ ಹೇಳಿದೆ.