×
Ad

ವೃದ್ಧನನ್ನು ಒದ್ದದ್ದು ಹೌದೆಂದ ಬಿಜೆಪಿ ಸಂಸದ

Update: 2016-03-30 22:50 IST

ಅಹ್ಮದಾಬಾದ್, ಮಾ.30: ಬಿಜೆಪಿ ಸಂಸದ ವಿಠ್ಠಲ ರಡಾಡಿಯಾ, ಸಮಾರಂಭವೊಂದರಲ್ಲಿ ತಾನು ವೃದ್ಧನೊಬ್ಬನಿಗೆ ಒದೆ ನೀಡಿದುದು ಹೌದೆಂದು ಇಂದು ಒಪ್ಪಿಕೊಂಡಿದ್ದಾರೆ. ಆದರೆ, ಇದೊಂದು ‘ಸಣ್ಣ ಘಟನೆ’ ಎಂದವರು ಪ್ರತಿಪಾದಿಸಿದ್ದಾರೆ.
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ರಡಾಡಿಯಾ ವೃದ್ಧ ವ್ಯಕ್ತಿಯೊಬ್ಬರಿಗೆ ಒದೆಯುತ್ತಿದ್ದುದು ಹಾಗೂ ವಸ್ತಗಳನ್ನೆತ್ತಿಕೊಂಡು ಹೊರ ಹೋಗುವಂತೆ ಆದೇಶಿಸುತ್ತಿದ್ದ ವೀಡಿಯೊ ಒಂದು ಬಹಿರಂಗವಾಗಿತ್ತು.
ಆ ವೃದ್ಧ, ಮೂಢ ನಂಬಿಕೆಗಳನ್ನು ಹರಡಲು ಯತ್ನಿಸುತ್ತಿದ್ದುದರಿಂದ ಹಾಗೂ ವಿಲಕ್ಷಣವಾಗಿ ವರ್ತಿಸುತ್ತಿದ್ದುದರಿಂದ ಅವನನ್ನು ಒದ್ದು ಹೊರ ದೂಡಿದೆನೆಂದು ರಡಾಡಿಯಾ ಪ್ರತಿಪಾದಿಸಿದ್ದಾರೆ.
ಆ ವ್ಯಕ್ತಿ ಸತತವಾಗಿ ತಲೆ ಹಾಗೂ ಮೈಯನ್ನು ಅಲುಗಾಡಿಸುತ್ತ ಮೂಢ ನಂಬಿಕೆಗಳನ್ನು ಹರಡುತ್ತಿದ್ದನು.ಆತನ ಕೃತ್ಯವು ಮಹಿಳೆಯರು ಸಹಿತ ಅನೇಕರಿಗೆ ಅಸಹನೆಯನ್ನು ಹುಟ್ಟಿಸುತ್ತೆಂದು ಅವರು ಹೇಳಿದ್ದಾರೆ.
ಆ ವೃದ್ಧ, 2-3 ದಿನಗಳಿಂದ ಗುಡಾರವೊಂದರಲ್ಲಿ ವಾಸಿಸುತ್ತಿದ್ದಾನೆಂದು ಸಂಘಟಕರು ತಿಳಿಸಿದರು. ಆತ ಇತರರಿಗೆ ತೊಂದರೆ ಕೊಡುವುದನ್ನು ತಪ್ಪಿಸಲು, ತಾನು ಮೊದಲು ಅವನಿಗೆ ಒದ್ದು, ಬಳಿಕ ಸಂಘಟಕರಿಗೆ ಆತನನ್ನು ಹೊರ ಹಾಕುವಂತೆ ಸೂಚಿಸಿದೆನು. ಆತ ಹೊರ ಹೋದ ಬಳಿಕ ಜನರು ಬಿಡುಗಡೆಯ ಉಸಿರು ಬಿಟ್ಟರು. ಇದೊಂದು ಸಣ್ಣ ಘಟನೆಯೆಂದು 57ರ ಹರೆಯದ ರಡಾಡಿಯಾ ತಿಳಿಸಿದ್ದಾರೆ.
ಆ ವ್ಯಕ್ತಿ ಈ ಸಂಬಂಧ ಯಾವುದೇ ದೂರು ಸಲ್ಲಿಸಿಲ್ಲ. ಆದರೆ, ಪೊಲೀಸರು ನಿನ್ನೆ ತಮ್ಮದೇ ತನಿಖೆಯನ್ನು ಆರಂಭಿಸಿದ್ದು, ವೀಡಿಯೊವನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News