×
Ad

ಲಾರಿ ಢಿಕ್ಕಿ ಹೊಡೆದು ಹೆಡ್‌ಕಾನ್‌ಸ್ಟೆಬಲ್ ಸಾವು ಪ್ರಕರಣ : ಚಾಲಕನಿಗೆ ಜೈಲು

Update: 2016-03-30 23:02 IST

ಮಂಗಳೂರು, ಮಾ. 30: ಅಪಘಾತವೆಸಗಿ ಹೆಡ್‌ಕಾನ್‌ಸ್ಟೇಬಲ್ ಒಬ್ಬರ ಸಾವಿಗೆ ಕಾರಣನಾದ ಲಾರಿಚಾಲಕ ದಾವಣಗೆರೆ ಮೂಲದ ಬಿ.ರಾಜಪ್ಪ(42) ಎಂಬಾತನಿಗೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ ಎರಡನೆ ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

  ಎನ್‌ಎಂಪಿಟಿ ಗೇಟ್‌ನ ಸಿಐಎಸ್‌ಎಫ್ ಹೆಡ್‌ಕಾನ್‌ಸ್ಟೆಬಲ್ ಪಿ.ಕೆ.ಮಾಧವನ್ ಉಣ್ಣಿ ಎಂಬವರ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ಈ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

2008ರ ಸೆ.23ರಂದು ಮಧ್ಯಾಹ್ನ 3.40ಕ್ಕೆ ಪಣಂಬೂರು ಎನ್‌ಎಂಪಿಟಿ ಗೇಟ್ ಬಳಿ ಚಾಲಕ ರಾಜಪ್ಪ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಎನ್‌ಎಂಪಿಟಿ ಗೇಟ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಐಎಸ್‌ಎಫ್ ಹೆಡ್‌ಕಾನ್‌ಸ್ಟೆಬಲ್ ಪಿ.ಕೆ.ಮಾಧವನ್ ಉಣ್ಣಿ ಎಂಬವರಿಗೆ ಢಿಕ್ಕಿ ಹೊಡೆದು ಆತನ ಸಾವಿಗೆ ಕಾರಣನಾಗಿದ್ದ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಎರಡನೆ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶ ಸಂತೋಷ್ ಎಸ್. ಕುಂದರ್ ವಾದ ಪ್ರತಿವಾದವನ್ನು ಆಲಿಸಿ ಆರೋಪಿ ತಪ್ಪಿತಸ್ಥ ಎಂದು ತೀರ್ಪು ಪ್ರಕಟಿಸಿದ್ದಾರೆ. ಅತಿವೇಗದ ಚಾಲನೆಗಾಗಿ 279ಸೆಕ್ಷನ್ ಪ್ರಕಾರ 3 ತಿಂಗಳ ಸಾದಾ ಸಜೆ, ಅಪಘಾತದಿಂದ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ 304(ಎ) ಪ್ರಕಾರ ಒಂದು ವರ್ಷ ಸಾದಾ ಸಜೆ ಮತ್ತು ವಾಹನದಿಂದ ಓಡಿ ಹೋದ ಬಗ್ಗೆ 187ರಂತೆ 500 ರೂ. ದಂಡವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ದಂಡ ಪಾವತಿಸಲು ಸಾಧ್ಯವಾಗದಿದ್ದರೆ ಮತ್ತೆ ಒಂದು ತಿಂಗಳ ಹೆಚ್ಚುವರಿ ಸಜೆಯನ್ನು ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಚೇತನ್ ನಾಯಕ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News