ಪಕ್ಷದ್ರೋಹ ಎಸಗಿದವರಿಗೆ ತಕ್ಕ ಶಿಕ್ಷೆ: ಹೇಮನಾಥ ಶೆಟ್ಟಿ
ಪುತ್ತೂರು, ಮಾ.30: ಅಧಿಕಾರದ ದುರಾಸೆಯಿಂದ ಪಕ್ಷಾಂತರ ನಿಷೇಧ ಕಾನೂನನ್ನು ಉಲ್ಲಂಘಿಸಿ ಕೆಲವೇ ದಿನಗಳು ಅಧ್ಯಕ್ಷರಾಗಿ ಪುತ್ತೂರು ನಗರಸಭೆಯ ಆಡಳಿತ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ ಪಕ್ಷಕ್ಕೆ ಮುಜುಗರ ತಂದಿದ್ದ ಹಾಗೂ ಪಕ್ಷ ಸಂಘಟನೆಯನ್ನು ಶಿಥಿಲಗೊಳಿಸುವ ಪ್ರಯತ್ನ ನಡೆಸಿ ಪಕ್ಷದ್ರೋಹವೆಸಗಿದ್ದವರಿಗೆ ತಕ್ಕ ಪ್ರತಿಫಲ ಸಿಕ್ಕಿದೆ. ನಗರಸಭಾ ಸದಸ್ಯ ಎಚ್.ಮುಹಮ್ಮದ್ ಅಲಿಯ ಹೋರಾಟಕ್ಕೆ ನ್ಯಾಯ ಲಭಿಸಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್‌ನ ಕೆಲವು ಸದಸ್ಯರು ಬಿಜೆಪಿಯೊಂದಿಗೆ ಶಾಮೀಲಾಗಿ ಅಧಿಕಾರ ಪಡೆಯುವ ಮೂಲಕ ಪಕ್ಷಕ್ಕೆ ದ್ರೋಹ ಬಗೆದರು. ನಗರಸಭೆೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದೆ. ರಾಜ್ಯ ಸರಕಾರ ಪುರಸಭೆಯನ್ನು ಮೇಲ್ದರ್ಜೆಗೆರಿಸಿದ್ದರೂ ಅಭಿವೃದ್ಧಿ ಶೂನ್ಯವಾಗಿದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ನಿಯೋಜಿತ ನಗರಸಭಾಧ್ಯಕ್ಷೆ ಜಯಂತಿ ನಾಯ್ಕ, ಸದಸ್ಯ ಎಚ್. ಮುಹಮ್ಮದ್ ಅಲಿ, ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲೋಕೇಶ್ ಹೆಗ್ಡೆ, ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಉಪಸ್ಥಿತರಿದ್ದರು.