ವಿಕೋಪಕ್ಕೆ ತಿರುಗಿದ ನೀರಿನ ಕುರಿತ ಚರ್ಚೆ: ಮುಂಡೂರು ಗ್ರಾಮ ಸಭೆ
ಪುತ್ತೂರು, ಮಾ.30: ಕುಡಿಯುವ ನೀರಿನ ವಿಚಾರದಲ್ಲಿ ನಡೆದ ಚರ್ಚೆ ವಿಕೋಪಕ್ಕೆ ತಿರುಗಿದ ಪರಿಣಾಮ ಕುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸುವುದರೊಂದಿಗೆ ಮಂಗಳವಾರ ನಡೆದ ಮುಂಡೂರು ಗ್ರಾಮ ಸಭೆ ಅಕ್ಷರಶ: ರಣರಂಗಕ್ಕೆ ಸಾಕ್ಷಿಯಾಯಿತು.
ಗ್ರಾಪಂ ಅಧ್ಯಕ್ಷ ಎಸ್.ಡಿ ವಸಂತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ಬಿಸಿ ಚರ್ಚೆ ಶುರುವಾಯಿತು. ಈ ಸಂದರ್ಭ ಜಿಪಂ ಇಂಜಿನಿಯರ್ ತಮ್ಮ ವ್ಯಾಪ್ತಿಗೊಳಪಡುವ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ಹಾಗೂ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಗ್ರಾಮಸ್ಥ ಉಮೇಶ್ ಎಂಬವರು ಎದ್ದು ನಿಂತು ‘ಅಂಬಟ ಎಂಬ ಪ್ರದೇಶದಲ್ಲಿ ನೀರಿನ ಸಮಸ್ಯೆಯಿದ್ದು ಪರಿಹಾರ ಮಾಡಿಕೊಡಬೇಕು’ಎಂದು ಹೇಳಿದರು. ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಪರಿಹಾರದ ಭರವಸೆ ವ್ಯಕ್ತವಾಯಿತು. ಆದರೂ ಉಮೇಶ್ ಮತ್ತೆ ನೀರಿನ ವಿಚಾರ ಪ್ರಸ್ತಾಪಿಸಿದಾಗ ಬಾತಿಷ್ ಬಡಕ್ಕೋಡಿ ಎಂಬವರು ಅಧ್ಯಕ್ಷರು ಸಮಸ್ಯೆಗೆ ಪರಿಹಾರ ಕಲ್ಪಿಸಲಿದ್ದಾರೆ ಎಂದರು. ಇದಕ್ಕೆ ಉಮೇಶ್ ಆಕ್ಷೇಪಿಸಿದರು.ಇದು ಇಬ್ಬರೊಳಗೆ ಮಾತಿನ ಚಕಮಕಿಗೆ ಕಾರಣವಾಯಿತು. ಈ ವೇಳೆ ಅರುಣ್ ಕುಮಾರ್ ಪುತ್ತಿಲ, ಸುಧೀರ್ ಶೆಟ್ಟಿ, ರಮೇಶ್, ಉಮೇಶ್ ಗೌಡ ಮತ್ತಿತರ 15ರಷ್ಟು ಮಂದಿ ತಾವು ಕುಳಿತಿದ್ದ ಕುರ್ಚಿಯನ್ನು ಎತ್ತಿಕೊಂಡು ಬಾತಿಷ್‌ರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾ ವೇದಿಕೆಯತ್ತ ಧಾವಿಸಿದರು. ಕೆಲವರು ಕುರ್ಚಿಯನ್ನು ಎಸೆದರು. ಇದರಿಂದ ಸಭೆಯಲ್ಲಿ ಗೊಂದಲ ಸೃಷ್ಟಿಯಾಯಿತು. ವಿಷಯ ತಿಳಿದ ಪೊಲೀಸರು ಸಭೆಗೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.