150ನೇ ದಾಖಲೆ ಸಂಚಿಕೆಯತ್ತಾ ಕೋಟಿ-ಚೆನ್ನಯ
ಕಾರ್ಕಳ : ಡಿಡಿ ಚಂದನವಾಹಿನಿಯಲ್ಲಿ ಪ್ರತಿ ಭಾನುವಾರ ಪ್ರಸಾರವಾಗುವ ಕೋಟಿ-ಚೆನ್ನಯ ಕನ್ನಡ ಧಾರವಾಹಿ ಯಶಸ್ವೀ 150ನೇ ದಾಖಲೆಯ ಸಂಚಿಕೆಯತ್ತಾ ಕಾಲಿರಿಸಿದೆ.
ಪ್ರತಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ಮತ್ತು ರಾತ್ರಿ 11.30ಕ್ಕೆ ಪ್ರಸಾರಗೊಳ್ಳುವ ಈ ಧಾರವಾಹಿ, ಎ.3ರಂದು 150ನೇ ಸಂಚಿಕೆಯನ್ನು ಪೂರ್ಣಗೊಳಿಸಿ ದಾಖಲೆಯತ್ತಾ ದಾಪುಕಾಲಿಟ್ಟಿದೆ. ಅನ್ಯಾಯದ ವಿರುದ್ದ ಸೆಟೆದು ನಿಂತು, ನ್ಯಾಯಕ್ಕಾಗಿ ಹೋರಾಡಿದ ತುಳುನಾಡಿನ ಅವಳಿ ವೀರರರಾದ ಕೋಟಿ-ಚೆನ್ನಯರು ಬದುಕಿ ಬಾಳಿದ ಆದರ್ಶದ ಕಥೆಯನ್ನು ನೆನಪಿಸುವ ಈ ಧಾರವಾಹಿಯಲ್ಲಿ, ಕೋಟಿ ಪ್ರಾತ್ರದಲ್ಲಿ ರಾಜಶೇಖರ ಶೆಟ್ಟಿ ಮಾಣಿ ಮತ್ತು ಚೆನ್ನಯನಾಗಿ ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್, ಪಿಜಿನಾರನಾಗಿ ಅರವಿಂದ ಬೋಳಾರ್, ಬುದ್ದಿವಂತನ ಪಾತ್ರದಲ್ಲಿ ಚೇತನ್ ಶೆಟ್ಟಿ ಮಾಣಿ ಅಭಿನಯಿಸುತ್ತಿದ್ದಾರೆ.
ಗ್ರಾಮೀಣಭಾಗದ ಚಿತ್ರಣ ಹಾಗೂ ಅಂದಿನ ಕಾಲದ ಬದುಕಿನ ಶೈಲಿಯನ್ನು ತಿಳಿಯಪಡಿಸುವ ಈ ಧಾರವಾಹಿಯುದ್ದಕ್ಕೂ ವಿನೂತನ ದೃಶ್ಯಾವಳಿಗಳೊಂದಿಗೆ ಹೆಸರಾಂತ ಕಲಾವಿದರ ಅಭಿನಯವು ನಾಡಿನ ಜನತೆಯ ಮನಸೆಳೆದಿದೆ. ಡಿಡಿ ಚಂದನವಾಹಿನಿಯ ಮೂಲಕ 72 ದೇಶಗಳಲ್ಲಿ ಪ್ರಸಾರಗೊಳ್ಳುವ ಈ ಧಾರವಾಹಿಯನ್ನು ವಿಶ್ವದ್ಯಾದಂತ ಜನತೆ ವೀಕ್ಷಿಸುತ್ತಿದ್ದಾರೆ.
ಅಶೋಕ್ ಎಂ.ಸುವರ್ಣ ಅವರ ನಿರ್ಮಾಣದ ಚೆಲ್ಲಡ್ಕ ಚಂದ್ರಹಾಸ ಆಳ್ವರ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನಲ್ಲಿ ಈ ಧಾರವಾಹಿ ಪ್ರಸಾರಗೊಳ್ಳುತ್ತಿದೆ.