ಉಪ್ಪಿನಂಗಡಿ: ಶಿಕ್ಷಕಿಯ ಮಾನಭಂಗ ಯತ್ನ
ಉಪ್ಪಿನಂಗಡಿ: ಶಿಕ್ಷಕಿಯ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಆರೋಪಿ ಯುವಕನನ್ನು ಪುತ್ತೂರು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.
ಆಲಂತಾಯದ ಬರಮೇಲು ನಿವಾಸಿ ಪುರಂದರ ಗೌಡ ಅವರ ಪುತ್ರ ಹರೀಶ್ (21) ಜಾಮೀನು ಪಡೆದುಕೊಂಡ ಆರೋಪಿ. ಕಳೆದ ಫೆ.24ರಂದು ಉಪ್ಪಾರಪಳಿಕೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯೋರ್ವರು ಶಾಲೆಯಿಂದ ನೆಲ್ಯಾಡಿಯ ತನ್ನ ಮನೆಗೆ ಆ್ಯಕ್ಟೀವಾ ಹೋಂಡಾದಲ್ಲಿ ಬರುತ್ತಿದ್ದ ವೇಳೆ ಈತ ನೆಲ್ಯಾಡಿ ಬೆಥನಿ ಶಾಲೆಯ ಬಳಿ ಇವರನ್ನು ಅಡ್ಡಗಟ್ಟಿ ಮಾನಭಂಗಕ್ಕೆ ಯತ್ನಿಸಿದ್ದ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿದ್ದ ಉಪ್ಪಿನಂಗಡಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಈತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ಈತ ಜಾಮೀನಿಗಾಗಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದು, ಈತನಿಗೆ ಜಾಮೀನು ನೀಡಿ ಪುತ್ತೂರಿನ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.
ಆರೋಪಿಯ ಪರವಾಗಿ ನ್ಯಾಯವಾದಿಗಳಾದ ಅನಿಲ್ ಕುಮಾರ್ ಉಪ್ಪಿನಂಗಡಿ ಹಾಗೂ ಸಂದೇಶ್ ನಟ್ಟಿಬೈಲ್ ವಾದಿಸಿದರು.