×
Ad

ಜಗನ್ನಾಥ ಶೆಟ್ಟಿ ಆಯೋಗದ ವರದಿ ಜಾರಿಗಾಗಿ ಜನಜಾಗೃತಿ ಅಭಿಯಾನ

Update: 2016-03-31 19:04 IST

ಭಟ್ಕಳ : ಭಟ್ಕಳ ಕೋಮು ಗಲಭೆಯ ತನಿಖೆಗಾಗಿ ಸರಕಾರದಿಂದ ನೇಮಕವಾಗಿದ್ದ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ ಜ್ಯಾರಿಗೆ ತರುವಂತೆ ಆಗ್ರಹಿಸಿ ಬೆಂಗಳೂರಿನಿಂದ ಭಟ್ಕಳದ ವರೆಗೆ ಜನಜಾಗೃತಿ ಅಭಿಯಾನ ನಡೆಸಲು ಶ್ರೀರಾಮ ಸೇನೆ ಚಿಂತನೆ ನಡೆಸಿದೆ ಎಂದು ಉತ್ತರ ಪ್ರಾಂತ ಅಧ್ಯಕ್ಷ ಬಸವರಾಜ್ ಬೂದಿಯಾಳ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನ್ಯಾ.ಮೂ. ಜಗನ್ನಾಥ ಶೆಟ್ಟಿ ಆಯೋಗದ ವರದಿ ಜ್ಯಾರಿಯಾದರೆ ಭಯೋತ್ಪಾದನೆ ಬಗ್ಗೆ ಹಲವು ಸಂಗತಿಗಳು ಬಯಲಾಗಲಿವೆ. ಸರಕಾರ ಕೂಡಲೇ ಇದನ್ನು ಜ್ಯಾರಿಗೆ ತರಬೇಕೆಂದು ನಮ್ಮ ಸಂಘಟನೆ ಆಗ್ರಹಿಸುತ್ತದೆ,     ರಾಜ್ಯದ ಕಾಂಗ್ರೆಸ್ ಸರಕಾರದ ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಪ್ರವೇಶಿಸದಂತೆ ನಿರ್ಬಂಧ ಹೇರುತ್ತಿರುವುದು ಸರಿಯಲ್ಲ. ರಾಜ್ಯದ ವ್ಯಕ್ತಿಗೆ ರಾಜ್ಯದಲ್ಲೇ ತಿರುಗಾಡಲು ನಿರ್ಬಂಧ ಹೇರುತ್ತಿರುವುದು ತೀವ್ರ ಖಂಡನೀಯ. ಸಂಸ್ಥಾಪಕರಿಗಾಗುತ್ತಿರುವ ಅನ್ಯಾಯವನ್ನು ಕಾರ್ಯಕರ್ತರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪರಿಸ್ಥಿತಿ ಹದಗೆಡುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಶ್ರೀ ರಾಮ ಸೇನೆ ತಕ್ಕ ಉತ್ತರ ನೀಡಲಿದೆ ಎಂದ ಅವರು ದೇಶದ್ರೋಹ ಕೆಲಸ ಮಾಡುವಂತವರು ರಾಜ್ಯದಲ್ಲಿ ಯಾವುದೇ ನಿರ್ಬಂಧ ಇಲ್ಲದೇ ಆರಾಮವಾಗಿ ಬಂದು ಹೋದರು ಸುಮ್ಮನಿರುವ ಸರಕಾರ ದೇಶಭಕ್ತ ಪ್ರಜೆಗೆ ನಿರ್ಬಂಧ ಹೇರು ವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಶ್ರೀ ರಾಮ ಸೇನೆ 10ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಈ ವರ್ಷವನ್ನು ಸಂಘಟನಾ ವರ್ಷವಾಗಿ ಕಾರ್ಯಪ್ರವೃತ್ತರಾಗಲಿದೆ. ರಾಜ್ಯದಲ್ಲಿ ಶ್ರೀರಾಮ ಸೇನೆಯನ್ನು ಮತ್ತಷ್ಟು ಬಲಿಷ್ಟವನ್ನಾಗಿ ಮಾಡಲಾಗುವುದು ಎಂದ ಅವರು ಶಾಸಕ ಮಂಕಾಳ ಎಸ್.ವೈದ್ಯ ಕಳೆದ ಕೆಲವು ದಿನಗಳ ಹಿಂದೆ ಭಟ್ಕಳದಲ್ಲಿ ಭಯೋತ್ಪಾದಕರಿಲ್ಲ ಎನ್ನುವ ಹೇಳಿಕೆ ನೀಡಿರುವ ಸಂಗತಿ ಕೂಡಾ ಖಂಡನೀಯವಾಗಿದ್ದು ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಿಲ್ಲಾ ಸಂಚಾಲಕ ಜಯಂತ ನಾಯ್ಕ, ಮುಖಂಡರಾದ ಸುರೇಶ ನಾಯ್ಕ, ಬಾಬು ಮೊಗೇರ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News