ಆರ್ .ಟಿ.ಐ ಕಾರ್ಯಕರ್ತ ವಿನಾಯಕ್ ಬಾಳಿಗ ಹತ್ಯೆ ಪ್ರಕರಣ: ಯುವ ಬ್ರಿಗೇಡ್ ಸಂಚಾಲಕನ ಮನೆಯಲ್ಲಿ ತನಿಖೆ
ಮಂಗಳೂರು, ಮಾ. 31: ಆರ್ .ಟಿ.ಐ ಕಾರ್ಯಕರ್ತ ವಿನಾಯಕ್ ಪಾಂಡುರಂಗ ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸರು ಯುವ ಬ್ರಿಗೇಡ್ ಸಂಚಾಲಕ ನರೇಶ್ ಶೆಣೈ ನಿವಾಸಕ್ಕೆ ದಾಳಿ ನಡೆಸಿದ್ದಾರೆ. ಮಂಗಳೂರು ಪೊಲೀಸ್ ಎಸಿಪಿ ತಿಲಕ್ ಚಂದ್ರ ಅವರ ನೇತೃತ್ವದಲ್ಲಿ ನಗರದ ಕಾರ್‌ಸ್ಟ್ರೀಟ್‌ನ ಧನ್ವಂತರಿ ನಗರದಲ್ಲಿರುವ ಮನೆಗೆ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮನೆಯಲ್ಲಿ ನರೇಶ್ ಶೆಣೈ ತಾಯಿ, ಮಡಿದಿ ಮತ್ತು ಮಗು ಮಾತ್ರ ಇದ್ದರು. ಸುಮಾರು ಒಂದುವರೆ ಗಂಟೆಗಳ ಕಾಲ ಮನೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ವಿನಾಯಕ್ ಬಾಳಿಗ ಹತ್ಯೆ ನಡೆದ ನಂತರ ಯುವ ಬ್ರಿಗೇಡ್ ಸಂಚಾಲಕ ನರೇಶ್ ಶೆಣೈ ನಾಪತ್ತೆಯಾಗಿದ್ದಾನೆ. ನರೇಶ್ ಶೆಣೈ ಹರಿದ್ವಾರಕ್ಕೆ ಹೋಗಿದ್ದಾರೆ ಎಂದು ಕುಟುಂಬ ಮೂಲಗಳು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದ್ದು ಆತ ಹರಿದ್ವಾರದಿಂದ ಅಂಡೋಮಾನ್‌ಗೆ ಹೋಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮಂಗಳೂರು ಎಸಿಪಿ ತಿಲಕ್ ಚಂದ್ರ ಅವರು ವಿನಾಯಕ್ ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲು ನರೇಶ್ ಶೆಣೈ ಮನೆಗೆ ಹೋಗಲಾಗಿತ್ತು. ಆದರೆ ವಿಚಾರಣೆಗೆ ನರೇಶ್ ಶೆಣೈ ಸಿಕ್ಕಿಲ್ಲ ಎಂದು ಹೇಳಿದ್ದಾರೆ.