ಮಂಗಳೂರು: ತುಂಬೆಯಲ್ಲಿ ನೀರಿದೆ, ವಾರ್ಡ್‌ಗಳಿಗೆ ನೀರು ಬರುತ್ತಿಲ್ಲ!

Update: 2016-03-31 15:11 GMT

ಮಂಗಳೂರು, ಮಾ. 31: ಮಹಾನಗರ ಪಾಲಿಕೆಗೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ಸಾಕಷ್ಟು ನೀರಿನ ಸಂಗ್ರಹವಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದರೂ ನಮ್ಮ ವಾರ್ಡ್‌ಗಳಿಗೆ ಮಾತ್ರ ನೀರು ಪೂರೈಕೆ ಸಮರ್ಪಕವಾಗಿಲ್ಲ ಎಂಬ ಅಸಮಾಧಾನದ ಮಾತುಗಳು ಮನಪಾದ ಬಹುತೇಕ ಸದಸ್ಯರಿಂದ ಇಂದು ವ್ಯಕ್ತವಾಗಿದೆ.

ನೂತನ ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಇಂದು ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಗರದ ನೀರಿನ ಸಮಸ್ಯೆ ಕುರಿತಂತೆಯೇ ಚರ್ಚೆ ನಡೆಯಿತು.

ನೀರು ಪೋಲು ಮಾಡದಿರಿ: ಮೇಯರ್ ಮನವಿ

ನೀರಿನ ಕುರಿತು ಚರ್ಚೆಯ ಆರಂಭದಲ್ಲೇ ನಗರದ ಜನತೆಗೆ ನೀರು ಪೋಲು ಮಾಡದಂತೆ ಮನವಿ ಮಾಡಿದ ಮೇಯರ್ ಹರಿನಾಥ್, ತುಂಬೆಯಲ್ಲಿ ಇಂದು 10.8 ಅಡಿಗಳಷ್ಟು ನೀರಿನ ಸಂಗ್ರಹವಿದೆ. ಎಎಂಆರ್ ಅಣೆಕಟ್ಟಿನಿಂದಲೂ ನೀರು ಹರಿಸಲಾಗುತ್ತಿದೆ. ಹಾಗಾಗಿ ಸುಮಾರು 55 ದಿನಗಳಿಗೆ ನಗರದ ಜನತೆಗೆ ಸಾಕಾಗುವಷ್ಟು ನೀರು ತುಂಬೆಯಲ್ಲಿದೆ. ಹಾಗಿದ್ದರೂ ನೀರು ಪೂರೈಕೆಯಲ್ಲಿನ ನಿರ್ವಹಣೆಯಿಂದ ಕೆಲವೊಂದು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಅದನ್ನು ಬಗಹರಿಸಲಾಗುತ್ತಿದೆ ಎಂದರು.

ಇದಕ್ಕೆ ಪ್ರತಿಯಾಗಿ ಮಾತನಾಡಿದ ವಿಪಕ್ಷ ನಾಯಕಿ ರೂಪಾ ಡಿ. ಬಂಗೇರಾ, ಮೇಯರ್‌ರವರು ತುಂಬೆಯಲ್ಲಿ ಸಾಕಷ್ಟು ನೀರು ಇದೆ ಎನ್ನುತ್ತಿದ್ದಾರೆ. ಆದರೆ ಬೇಸಿಗೆಯ ಆರಂಭದಲ್ಲೇ ನೀರಿನ ಸಮಸ್ಯೆ ಎದುರಾಗಿದೆ. ಇನ್ನು ಎಪ್ರಿಲ್ ಮೇ ತಿಂಗಳಲ್ಲಿ ಜನರ ಪಾಡೇನು ಎಂದು ಪ್ರಶ್ನಿಸಿದರಲ್ಲದೆ, ಎಮ್ಮೆಕೆರೆ, ಕಂದುಕ, ಪಾಂಡೇಶ್ವರ, ಮಾರ್ಕೆಟ್ ರೋಡ್, ಜಪ್ಪಿನಮೊಗರು, ಬಜಾಲ್ ಕುತ್ತಡ್ಕ ಮೊದಲಾದ ಕಡೆ ನೀರಿಲ್ಲದೆ ಜನರು ಪರದಾಡುವ ಪರಿಸ್ಥಿತಿ ಇದೆ. ಮನಪಾದ ಒಂದು ಟ್ಯಾಂಕರ್‌ನಲ್ಲಿ ಯಾವ ರೀತಿ ನೀರು ಸರಬರಾಜು ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ನೀರಿದ್ದರೂ ನಿರ್ವಹಣೆ ಮತ್ತು ವಿತರಣೆಯಲ್ಲಿ ದೋಷವಿದೆ ಎಂದಾಗುವಾಗ ಆ ಬಗ್ಗೆ ಯಾಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲ್ಯಾನ್ಸಿ ಲೋಟ್ ಪಿಂಟೋ ಅವರು ನೀರಿನ ಸಮಸ್ಯೆ ನೀಗಿಸಲು ನಡೆದ ಸ್ಥಾಯಿ ಸಮಿತಿ ಸಭೆಯನ್ನು ಪ್ರಸ್ತಾಪಿಸಲು ಮುಂದಾದಾಗ ವಿಪಕ್ಷ ಸದಸ್ಯರು ಆಕ್ಷೇಪಿಸುತ್ತಾ, ಸಭೆಯ ಮಾಹಿತಿ ನಮಗೆ ಬೇಡ, ಕೈಗೊಂಡ ಕ್ರಮದ ಬಗ್ಗೆ ತಿಳಿಸಿ ಎಂದರು.

ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ, ರಾಧಾಕೃಷ್ಣ, ಪ್ರತಿಭಾ ಕುಳಾಯಿ, ಅಖಿಲಾ ಆಳ್ವ, ತಿಲಕ್ ರಾಜ್, ರತಿಕಲಾ, ಅಶೋಕ್ ಡಿ.ಕೆ. ಮೊದಲಾದವರು ನೀರಿನ ಸಮಸ್ಯೆ ಬಗ್ಗೆ ಸಭೆಯ ಗಮನ ಸೆಳೆದರು.

ಈ ಸಂದರ್ಭ ಉತ್ತರ ನೀಡಿದ ಆಯುಕ್ತರಾಡ ಡಾ. ಗೋಪಾಲಕೃಷ್ಣ, ತುಂಬೆಯಲ್ಲಿ ನೀರು ಸಂಗ್ರಹವಿದೆ. ವಿದ್ಯುತ್ ವ್ಯತ್ಯಯ, ಅಕ್ರಮ ಸಂಪರ್ಕಗಳಿಂದಾಗಿ ನೀರಿನ ವಿತರಣೆಯಲ್ಲಿ ಕೆಲವೆಡೆ ಸಮಸ್ಯೆಯಾಗಿದೆ. ಇದೀಗ ಉಪ ಆಯುಕ್ತರ ಮಟ್ಟದ ಹಿರಿಯ ಅಧಿಕಾರಿಗಳ ಐದು ತಂಡಗಳನ್ನು ರಚಿಸಿ ತಂಡಕ್ಕೆ ತಲಾ 12 ವಾರ್ಡ್‌ಗಳನ್ನು ನಿಗದಿ ಮಾಡಲಾಗಿದೆ. ತಂಡದ ಅಧಿಕಾರಿಗಳು ನೀರಿನ ಸಮಸ್ಯೆ ಇರುವ ವಾರ್ಡ್‌ಗಳಿಗೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಲಿದ್ದಾರೆ. ನೀರು ವಿತರಣೆಗೆ ಇಂತಿಷ್ಟು ಗಂಟೆಗಳ ವೇಳಾಪಟ್ಟಿಯನ್ನು ತಯಾರಿಸುವಂತೆಯೂ ಸೂಚನೆ ನೀಡಲಾಗಿದೆ. ಯಾರದ್ದೂ ಹಸ್ತಕ್ಷೇಪವಿಲ್ಲದಿದ್ದಲ್ಲಿ ಮನಪಾ ವ್ಯಾಪ್ತಿಯ ನೀರಿನ ಸಮಸ್ಯೆಯನ್ನು ಒಂದು ವಾರದಲ್ಲಿ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು.

ಸದಸ್ಯರಾದ ಅಬ್ದುಲ್ ರವೂಫ್ ಮಾತನಾಡಿ, ಮನಪಾ ಗುತ್ತಿಗೆದಾರರು ಬಾಕಿ ಬಿಲ್ ಪಾವತಿಗೆ ಅಕೌಂಟ್ ಸೆಕ್ಷನ್‌ಗೆ ತೆರಳಿದರೆ ಅವರ ಜತೆ ಅಧಿಕಾರಿಗಳು ಉದ್ಧಟತನದಿಂದ ವರ್ತಿಸುತ್ತಿರುವುದಲ್ಲದೆ, ಪೊಲೀಸರನ್ನು ಮನಪಾಕ್ಕೆ ಕರೆಯಿಸುವ ಪ್ರಸಂಗ ನಡೆಯುತ್ತಿದೆ ಎಂದು ದೂರಿದರು. ಈ ಬಗ್ಗೆ ಸಂಬಂಧಪಟ್ಟವರನ್ನು ತನ್ನ ಕೊಠಡಿಗೆ ಕರೆಯಿಸಿ ಚರ್ಚಿಸುವುದಾಗಿ ಮೇಯರ್ ಭರವಸೆ ನೀಡಿದರು.

ಸಭೆಯನ್ನು ಕಾಡಿದ ಮರಳಿನ ಸಮಸ್ಯೆ!

ನಗರದಲ್ಲಿ ಈಗಾಗಲೇ ತಲೆದೋರಿರುವ ಮರಳಿನ ಕೊರತೆ ಸಮಸ್ಯೆ ಮನಪಾ ಸಭೆಯಲ್ಲೂ ಚರ್ಚೆಗೆ ಕಾರಣವಾಯಿತು. ವಿಪಕ್ಷ ಸದಸ್ಯ ಸುಧೀರ್ ಶೆಟ್ಟಿ ವಿಷಯ ಪ್ರಸ್ತಾಪಿಸುತ್ತಾ ನಗರದಲ್ಲಿ ಮರಳಿನ ಕೊರತೆಯಿಂದ ಸರಕಾರಿ ನಿರ್ಮಾಣ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಎಂದು ಆಕ್ಷೇಪಿಸಿದರು. ಮರಳು ನೀತಿಯನ್ನು ಸರಿಪಡಿಸಲು ಆಗದಿದ್ದರೆ ಜನರನ್ನು ಮರುಳು ಮಾಡುವ ಕೆಲಸವನ್ನೂ ಮಾಡಬೇಡಿ ಎಂದು ರೂಪಾ ಡಿ. ಬಂಗೇರ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯರನೇಕರು ಆಕ್ಷೇಪಿಸುತ್ತಾ, ಜಿಲ್ಲಾಧಿಕಾರಿಯವರು ಮನಪಾ ವ್ಯಾಪ್ತಿಗೆ ಮರಳು ತೆಗೆಯಲು ಪ್ರತ್ಯೇಕ ಯಾರ್ಡ್ ಗುರುತಿಸಿ ಒಂದು ವಾರ ಕಳೆದಿದ್ದರೂ ಮರಳು ಸಿಗುತ್ತಿಲ್ಲ. ಕಾರ್‌ಸ್ಟ್ರೀಟ್ ರಸ್ತೆ ಕಾಮಗಾರಿ ಮರಳಿಲ್ಲದೆ ಸ್ಥಗಿತವಾಗಿ ಜನರು ಇಂದು ಪ್ರತಿಭಟನೆ ನಡೆಸುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.

ಮೇಯರ್ ಹರಿನಾಥ್ ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿಯವರು ಮನಪಾ ಕಾಮಗಾರಿಗಳಿಗೆ ಅರ್ಕುಳ ಯಾರ್ಡ್‌ನಿಂದ ಮರಳು ತೆಗೆಯಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಬಿಜೈನಲ್ಲಿ ಮರಳು ಸಂಗ್ರಹಿಸುವ ಕಾರ್ಯವಾಗಿದೆ. ಆದರೆ ಆ ಮರಳು ಕಾಂಕ್ರೀಟ್ ಕಾಮಗಾರಿಗೆ ಸರಿಯಿಲ್ಲವಾಗಿದ್ದು, ಬೇರೆ ಜಾಗದ ಮರಳನ್ನು ತೋರಿಸಿದ್ದಾರೆ. ನಾಳೆಯಿಂದ ಆ ಜಾಗದಿಂದ ಮರಳು ತೆಗೆಯಲಾಗುವುದು. ಕಾರ್‌ಸ್ಟ್ರೀಟ್ ರಸ್ತೆ 11 ಕೋಟಿ ರೂ.ಗಳ ಕಾಮಗಾರಿ. ಅದಕ್ಕೆ ಕೆಲ ಸಮಯ ಬೇಕು. ಜನರ ಕಳಕಳಿ ಅರ್ಥವಾಗುತ್ತದೆ. ಕಾಮಗಾರಿಗೆ ಸಂಬಂಧಿಸಿ ಗುತ್ತಿಗೆದಾರರ ಜತೆ ಮಾತುಕತೆ ನಡೆಸಿದ್ದು,  ಎರಡು ದಿನಗಳಲ್ಲಿ ಕೆಲಸ ಆರಂಭಿಸಲಿದ್ದಾರೆ. ಅವರಿಗೆ ಮರಳನ್ನು ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಉಪ ಮೇಯರ್ ಸುಮಿತ್ರಾ ಕರಿಯ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಉಪಸ್ಥಿತರಿದ್ದರು.

ಕೆಲಸ ಮಾಡಲು ಆಸಕ್ತಿ ಇಲ್ಲದ ಅಧಿಕಾರಿಗಳು ನಮಗೆ ಬೇಡ!

ನೀರಿನ ಸಮಸ್ಯೆ ಕುರಿತಂತೆ ಆರಂಭದಲ್ಲಿ ಮೇಯರ್‌ರವರು ಸುಪರಿಂಟೆಂಡ್ ಇಂಜನಿಯರ್‌ರವರನ್ನು ಉತ್ತರಿಸುವಂತೆ ತಿಳಿಸಿದಾಗ, ಅಧಿಕಾರಿಗಳು ಹಾಗೂ ಕಿರಿಯ ಇಂಜನಿಯರ್‌ಗಳ ನಡುವೆ ಸಮನ್ವಯದ ಕೊರತೆ ಇದೆ ಎಂದು ಸಭೆಯಲ್ಲಿ ಬಹಿರಂಗವಾಗಿಯೇ ಹೇಳಿ ಬಿಟ್ಟರು. ಈ ಬಗ್ಗೆ ಸದಸ್ಯರಿಂದ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

ನೀರಿನ ಚರ್ಚೆಯ ಕೊನೆಯಲ್ಲಿ ಮೇಯರ್ ಹರಿನಾಥ್‌ರವರು ಪ್ರತಿಕ್ರಿಯಿಸುತ್ತಾ, ಒಂದು ವಾರದೊಳಗೆ ಆಯುಕ್ತರು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಅಧಿಕಾರಿಗಳು ಎಲ್ಲರೂ ಸಹಕರಿಸಿ, ಒಂದು ವಾರದ ಬಳಿಕ ಈ ಬಗ್ಗೆ ವಿಶೇಷ ಸಭೆ ನಡೆಸಿ ವಿಮರ್ಶೆ ಮಾಡಲಾಗುವುದು. ಮಾತ್ರವಲ್ಲದೆ, ನಗರದಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲದ ಅಧಿಕಾರಿಗಳು ನಮಗೆ ಅಗತ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News