×
Ad

ಬೆಳೆಯುತ್ತಿರುವ ತಂತ್ರಜ್ಞಾನದೊಂದಿಗೆ ವೃತ್ತಿ ಕೌಶಲ್ಯತೆ ಬೆಳೆಸಿಕೊಳ್ಳಿ: ಸಿಪಿಐ ಪ್ರಶಾಂತ್

Update: 2016-03-31 21:47 IST

ಭಟ್ಕಳ, ಮಾ. 31: ಛಾಯಾಗ್ರಾಹಕರು ತಮ್ಮ ವೃತ್ತಿಯಲ್ಲಿ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳುವುದರ ಮೂಲಕ ವೃತ್ತಿ ನೈಪುಣ್ಯತೆಯನ್ನು ತೋರಿಸಬೇಕಾಗಿದೆ ಎಂದು ಭಟ್ಕಳ ಪೊಲೀಸ್ ವೃತ್ತಾಧಿಕಾರಿ ಪ್ರಶಾಂತ್ ನಾಯಕ ಹೇಳಿದರು.

ಅವರು ಶಿರಾಲಿಯ ಸಾರದೊಳೆ ನಾಮಧಾರಿ ಸಭಾಭವನದಲ್ಲಿ ಜರಗಿದ ತಾಲೂಕು ಛಾಯಾಗ್ರಾಹಕರ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಫೊಟೋಗ್ರಾಫಿಯಲ್ಲಿ ಬಹಳಷ್ಟು ಕ್ರಾಂತಿಕಾರಿ ಬೆಳವಣಿಗೆಗಳಾಗಿದ್ದು ತಾಂತ್ರಿಕತೆಯಿಂದಾಗಿ ಫೋಟೊಗ್ರಾಫಿ ವೃತ್ತಿಯೂ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಗ್ರಾಹಕರು ನೂತನ ತಂತ್ರಜ್ಞಾನದ ಪ್ರಯೋಜನ ಪಡೆಯಬೇಕಾದರೆ ವೃತ್ತಿ ನಿರತರಿಗೆ ತಾಂತ್ರಿಕತೆಯ ಜ್ಞಾನ ಅವಶ್ಯವಾಗಿದೆ ಎಂದರು. ವೃತ್ತಿಯಲ್ಲಿನ ಸ್ಪರ್ಧೆಯಿಂದಾಗಿ ಪರಸ್ಪರ ವೈರತ್ವ ಬೆಳೆಯುವ ಸಾಧ್ಯತೆ ಇರುತ್ತದೆ. ಆದರೆ ಇಂತಹ ಸಂಘಟನೆಯಿಂದಾಗಿ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ನೀವು ಸಮಸ್ಯೆಗಳು ಬಾರದಂತೆ ಮುಂಜಾಗೃತೆ ವಹಿಸಬಹುದು. ಅಲ್ಲದೇ ಅನಾವಶ್ಯಕವಾದ ಸ್ಪರ್ಧೆಯನ್ನು ಸಹ ತಪ್ಪಿಸಬಹುದು ಎಂದರು. ಪೊಲೀಸ್ ಇಲಾಖೆಗೂ ಛಾಯಾಗ್ರಾಹಕರಿಗೂ ಉತ್ತಮವಾದ ನಂಟಿದೆ. ಹಲವಾರು ಗಂಭೀರ ಅಪರಾಧ ಪ್ರಕರಣಗಳಲ್ಲಿ ತಮ್ಮ ಸಹಾಯ ಇಲಾಖೆಗೆ ಅತೀ ಅಗತ್ಯವಿರುತ್ತದೆ. ಅಂತಹ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿಯೂ ಸಹ ಬಂದು ಇಲಾಖೆಗೆ ಸಹಕರಿಸುವ ಗುಣವನ್ನು ಬೆಳೆಸಿಕೊಂಡಿರುವ ಛಾಯಾಗ್ರಾಹಕರು ತಮ್ಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷವಾಗುತ್ತಿದೆ ಎಂದರು. ಸಂಘದ ಅಧ್ಯಕ್ಷ ರಾಜೇಶ್ ಹರಿಕಾಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಹಿತಿ, ಕರ್ನಾಟಕ ಯುನಿವರ್ಸಿಟಿ ಸಿಂಡಿಕೇಟ್ ಸದಸ್ಯ ಸೈಯದ್ ಝಮೀರುಲ್ಲಾ ಶರೀಫ್, ಕರ್ನಾಟಕ ಫೊಟೋಗ್ರಾಫರ್ಸ್‌ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಸುರೇಶ್ ಹೊನ್ನಾವರ ಉಪಸ್ಥಿತರಿದ್ದರು. ಸಿದ್ಧಾರ್ಥ ಪ್ರೌಢ ಶಾಲೆಯ ಶಾರದಾ ನಾಯ್ಕ ಪ್ರಾರ್ಥಿಸಿದರು. ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ಕಿರಣ್ ಶ್ಯಾನುಭಾಗ್ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News