ಮಂಗಳೂರು ವಿವಿಯಲ್ಲಿ ‘ದರ್ಪಣ-2016’ ಕಾರ್ಯಕ್ರಮ
ಮಂಗಳೂರು ವಿವಿಯನ್ನು ಪ್ರತಿನಿಧಿಸಿ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಂತರ್ ವಿವಿ ಮಟ್ಟದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವ ‘ದರ್ಪಣ’-2016’ ಕಾರ್ಯಕ್ರಮವು ಮಂಗಳಾ ಅಡಿಟೋರಿಯಂನಲ್ಲಿ ಗುರುವಾರ ನಡೆಯಿತು.
ಸಮಾರಂಭದಲ್ಲಿ ಆಳ್ವಾಸ್ ಮೂಡುಬಿದಿರೆ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡರೆ ಉಜಿರೆ ಎಸ್‌ಡಿಎಂ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು. ಅಲೋಶಿಯಸ್ ಕಾಲೇಜು ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಇದೇ ಸಂದರ್ಭದಲ್ಲಿ 2015-16ನೇ ಸಾಲಿನಲ್ಲಿ ನಡೆದ ಕ್ರೀಡಾ ಕ್ಷೇತ್ರದ ಸಾಧಕರಿಗೆ ನಗದು ಬಹುಮಾನದೊಂದಿಗೆ ಪುರಸ್ಕರಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ಭಾರತೀಯ ಹಾಕಿ ತಂಡದ ಮಾಜಿ ಕಪ್ತಾನ, ಅರ್ಜುನ ಪ್ರಶಸ್ತಿ ಪುರಸ್ಕೃತ ಅರ್ಜುನ್ ಹಾಲಪ್ಪ ಅವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರು, ಮಂಗಳೂರು ವಿವಿ ಶಿಕ್ಷಣ ಕ್ಷೇತ್ರ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಯೊಂದಿಗೆ ಮುನ್ನಡೆಯುತ್ತಿದೆ. 36 ವರ್ಷಗಳ ಇತಿಹಾಸದಲ್ಲಿ ಮಂಗಳೂರು ವಿವಿ ಅಖಿಲ ಭಾರತ ಮಟ್ಟದ ಕ್ರೀಡೆಕೂಟಗಳಲ್ಲಿ ಮೂರು ಬಾರಿ ಚಾಂಪಿಯನ್ ಆಗುವ ಮೂಲಕ ಅದ್ವಿತೀಯ ಸಾಧನೆ ಮಾಡಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಂಗಳೂರು ವಿವಿ ದೊಡ್ಡ ಮೊತ್ತದ ನಗದು ಬಹುಮಾನದೊಂದಿಗೆ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪ್ರೋ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ, 2010-12ರಲ್ಲಿ ಕ್ರೀಡೆಯಲ್ಲಿ ಬಹುಮಾನ ಪಡೆದು ಮುಂದಿನ ಸಾಲಿನಲ್ಲಿ ಕೂತಿದ್ದ ತಾನು ಇಂದು ಅದೇ ವೇದಿಕೆಯಲ್ಲಿ ಅತಿಥಿಯಾಗಿದ್ದೇನೆ. ಇದೇ ರೀತಿ ಇಂದು ಬಹುಮಾನ ಪಡೆದ ವಿದ್ಯಾರ್ಥಿಗಳು ಮುಂದೊಂದು ದಿನ ಉನ್ನತ ಸ್ಥಾನಕ್ಕೇರಲು ಪ್ರಯತ್ನಿಸಬೇಕು ಎಂದು ಹೇಳಿದರು.
ಮೈಸೂರು ಸಂತ ಫಿಲೋಮಿನ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಟೇ ಗೌಡ ಮಾತನಾಡಿ ‘ಮನುಷ್ಯ ಜಗತ್ತಿಗ ಬರುವಾಗ ಇದ್ದ ಸ್ಥಿತಿಯಿಂದ ಇಲ್ಲಿಂದ ಹೋಗುವ ಉತ್ಕೃಷ್ಠ ಸ್ಥಿತಿಯಲ್ಲಿ ಬಿಟ್ಟು ಹೋಗುವುದು ಮಾನವ ಧರ್ಮ. ಕರಾವಳಿಯ ಜನ ತುಳು ಎನ್ನುವ ಪುಟ್ಟ ಭಾಷೆಯನ್ನು ಅವಕಾಶ ಸಿಕ್ಕಾಗಲೆಲ್ಲಾ ಬಳಸಿ ವಿಶ್ವದ ಭೂಪಟದಲ್ಲಿ ಇಲ್ಲಿ ಸಂಸ್ಕೃತಿಯನ್ನು ಸೇರಿಸಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಚಾರ’ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪ್ರೋ ಕಬಡ್ಡಿ ಆಟಗಾರ ಸಚಿನ್ ಸುವರ್ಣ ಅತಿಥಿಯಾಗಿ ಭಾಗವಹಿಸಿದ್ದರು.
ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡಾ.ಉದಯ ಕುಮಾರ್ ಬಾರ್ಕೂರು
, ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್, ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಪಿ.ಕೆ., ರಮೇಶ್ ಎಚ್.ಎಂ ಮೊದಲಾದವರು ಉಪಸ್ಥಿತರಿದ್ದರು. ಡಾ.ಸಂತೋಷ್ ಜೆರಾಲ್ಡ್ ಡಿಸೋಜ ಸ್ವಾಗತಿಸಿದರು. ಪತ್ರಕರ್ತ ಮನೋಹರ್ ಪ್ರಸಾದ್ ಹಾಗೂ ಮಧು ಮಾಯಿಲಂಕೋಡಿ ಕಾರ್ಯ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅಡೋ ಅಬ್ದುಲ್‌ಕಾದಿರ್ ಅವರು ಕನ್ನಡ ಹಾಡಿನೊಂದಿಗೆ ಮನರಂಜಿಸಿದರೆ, ಅಶೋಕ್ ಪೊಳಲಿ ಅವರು ಕೋಳಿ ನೃತ್ಯದ ಮೂಲಕ ಜನಮನಸೆಳೆದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರೊ.ಕೃಷ್ಟೇ ಗೌಡ ಅವರು ಹಾಸ್ಯ ಲಹರಿ ಕಾರ್ಯಕ್ರಮ ನಡೆಯಿತು.