ದಲಿತ ಮಾನವ ಹಕ್ಕು ಚಳವಳಿಯ 7 ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ
ತಿರುವನಂತಪುರ, ಮಾ.31: ಸೆಪ್ಟಂಬರ್, 2009ರಲ್ಲಿ 60ರ ಹರೆಯದ ವೃದ್ಧನೊಬ್ಬನನ್ನು ಕೊಲೆ ಮಾಡಿದ್ದುದಕ್ಕಾಗಿ, ದಲಿತ ಮಾನವ ಹಕ್ಕು ಚಳವಳಿಯ 7 ಮಂದಿ ಕಾರ್ಯಕರ್ತರಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದು ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
2ನೆ ಹೆಚ್ಚುವರಿ ಸತ್ರ ನ್ಯಾಯಾಧೀಶ ಎ.ಬದ್ರುದ್ದೀನ್, ಅಪರಾಧಿಗಳಿಗೆ ತಲಾ ರೂ.2ಲಕ್ಷ ದಂಡವನ್ನೂ ವಿಧಿಸಿದ್ದು, ರೂ. 6ಲಕ್ಷವನ್ನು ಮೃತನ ಕುಟುಂಬಕರಿಗೆ ಪಾವತಿಸುವಂತೆ ಆದೇಶಿಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡಿದ್ದ ಚಹಾ ವ್ಯಾಪಾರಿಯೊಬ್ಬನಿಗೆ ರೂ.2ಲಕ್ಷ ನೀಡುವಂತೆಯೂ ಅಪರಾಧಿಗಳಿಗೆ ಅವರು ಸೂಚಿಸಿದ್ದಾರೆ.
ಶಿವಪ್ರಸಾದ್ ಎಂಬ ವ್ಯಕ್ತಿ 2009ರ ಸೆಪ್ಟಂಬರ್ 23ರಂದು ವರ್ಕಳದ ಐರೂರು ಎಂಬಲ್ಲಿ ನಸುಕಿನ ನಡಿಗೆಗಾಗಿ ಹೋಗಿದ್ದಾಗ ಮಾನವ ಹಕ್ಕು ಚಳವಳಿಯ ಕಾರ್ಯಕರ್ತರು ಅವರ ಮೇಲೆ ದಾಳಿ ನಡೆಸಿದ್ದರು. ದುಷ್ಕರ್ಮಿಗಳು ಚಹಾ ವ್ಯಾಪಾರಿ ಅಶೋಕನ್ ಎಂಬವರ ಮೇಲೂ ಹಲ್ಲೆ ನಡೆಸಿದ್ದು, ಇನ್ನೊಬ್ಬ ವ್ಯಕ್ತಿಯನ್ನು ಅಟ್ಟಿಸಿಕೊಂಡು ಹೋಗಿದ್ದರು.
ಶಿಕ್ಷೆ ವಿಧಿಸಲ್ಪಟ್ಟವರಲ್ಲಿ ಚಳವಳಿಯ ಅಧ್ಯಕ್ಷ ಸೆಲ್ವರಾಜ್ ಹಾಗೂ ದಕ್ಷಿಣ ವಲಯ ಸಂಘಟಕ ದಾಸ್‌ಎಂಬವರು ಸೇರಿದ್ದಾರೆ.
ಡಿಎಚ್‌ಆರ್‌ಎಂ ಕಾರ್ಯಕರ್ತರು ತಮ್ಮ ಸಂಘನೆಯ ಶಕ್ತಿ ಪ್ರದರ್ಶಿಸುವುದಕ್ಕಾಗಿ ಈ ದಾಳಿ ನಡೆಸಿದ್ದಾರೆಂದು ಪ್ರಾಸಿಕ್ಯೂಶನ್ ವಾದಿಸಿತ್ತು.