×
Ad

ಪ್ರಶ್ನೆಪತ್ರಿಕೆ ಸೋರಿಕೆ: ವಿದ್ಯಾರ್ಥಿಗಳಿಂದ ಧರಣಿ

Update: 2016-03-31 23:53 IST

ಉಡುಪಿ, ಮಾ.31: ವಿಜ್ಞಾನ ಕಲಿತವರು ಇಂಜಿನಿಯರಿಂಗ್ ದಾಸರಾಗಲು, ಇಂಜಿನಿಯರ್‌ಗಳು ಐಟಿ/ಬಿಟಿಗಳ ದಾಸರಾಗಲು, ಹೆಚ್ಚು ಹೆಚ್ಚು ಹಣ ಗಳಿಸುವ ಉದ್ಯೋಗದ ದಾಸರನ್ನಾಗಿಸುವ ದಂಧೆಯ ಕಾರಣಕ್ಕೆ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗು­ತ್ತಿವೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಆರೋಪಿಸಿದ್ದಾರೆ.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕೂಡಲೇ ಕ್ರಮ ಜರಗಿಸುವಂತೆ ಒತ್ತಾಯಿಸಿ ಎಸ್‌ಐಒ ಉಡುಪಿ ಜಿಲ್ಲಾ ಘಟಕ ಗುರುವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಹಮ್ಮಿಕೊಂಡ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ವಿಜ್ಞಾನ ಅಂದರೆ ಇಂಜಿನಿಯರಿಂಗ್ ಎಂಬ ತಪ್ಪು ಗ್ರಹಿಕೆ ಮೂಡಿದೆ. ಇದಕ್ಕೆ ವ್ಯವಸ್ಥೆ, ಸರಕಾರಗಳೇ ಕಾರಣವಾಗಿವೆ. ಇದೊಂದು ದಂಧೆಯಾಗಿ ಬೆಳೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಯಿಂದ ಮಾತ್ರ ಇದನ್ನು ತಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಎಸ್‌ಐಒ ಜಿಲ್ಲಾಧ್ಯಕ್ಷ ಯಾಸೀನ್ ಕೋಡಿಬೆಂಗ್ರೆ ಮಾತನಾಡಿ, ಅಧಿಕಾರಿಗಳ ಹಸ್ತಕ್ಷೇಪ ಇಲ್ಲದೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಲು ಸಾಧ್ಯವಿಲ್ಲ. ಆದ್ದರಿಂದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಕಾರ್ಯದರ್ಶಿ ಮುಹಮ್ಮದ್ ಶಾರೂಕ್, ಹೂಡೆ ಘಟಕದ ಅಧ್ಯಕ್ಷ ಸಲಾವುದ್ದೀನ್, ಕುಂದಾಪುರ ಅಧ್ಯಕ್ಷ ಹಫ್ಸನ್, ಮಾಜಿ ಅಧ್ಯಕ್ಷ ಹುಸೈನ್ ಕೋಡಿ ಬೆಂಗ್ರೆ, ಫಹೀಮ್, ಬಿಲಾಲ್, ಹಸನ್ ಮತ್ತಿತರರು ಉಪಸ್ಥಿತರಿದ್ದರು.

ಎಬಿವಿಪಿ ಧರಣಿ: ಪ್ರಶ್ನೆ ಪತ್ರಿಕೆ ಸೋರಿಕೆ ನೆಪದಲ್ಲಿ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ವಿಷಯದ ಪರೀಕ್ಷೆಯನ್ನು ದಿನೇ ದಿನೇ ಮುಂದೂಡುತ್ತಿರುವುದನ್ನು ವಿರೋಧಿಸಿ ಎಬಿವಿಪಿ ಉಡುಪಿ ಜಿಲ್ಲಾ ಘಟಕ ಗುರುವಾರ ಕ್ಲಾಕ್ ಟವರ್ ಎದುರು ಧರಣಿ ನಡೆಸಿತು.

ಧರಣಿಯಲ್ಲಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀರಾಜ್, ಸುಹಾಸ್, ಜೈದೀಪ್, ಪಿಪಿಸಿಯ ಸುಮೇದ್ ಸಾಮಗ, ಎಬಿವಿಪಿ ಮುಖಂಡ ಸುಬೋಧ್, ಮಹೇಶ್ ಕಾಲೇಜಿನ ಗುರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News