ಸುಳ್ಯ : ವೃದ್ಧೆ ತಾಯಿಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಮಗ ನಾಪತ್ತೆ
ಸುಳ್ಯ: ವೃದ್ಧೆಯೊಬ್ಬರನ್ನು ಅವರ ಮಗ ಸುಳ್ಯ ಬಸ್ ನಿಲ್ದಾಣದಲ್ಲಿ ಬಿಟ್ಟು ನಾಪತ್ತೆಯಾದ ಘಟನೆ ಸುಳ್ಯದಲ್ಲಿ ನಡೆದಿದ್ದು, ಅನಾಥ ವೃದ್ಧೆಯನ್ನು ಬೆನಕಾ ಕಲಾ ಮತ್ತು ಕ್ರೀಡಾ ಸಂಘದವರು ಉಪಚರಿಸಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಅಜ್ಜಾವರ ಗ್ರಾಮದ ಮುಳ್ಯದ ಅಣ್ಣಯ್ಯ ಗೌಡರ ಪತ್ನಿ ವೃದ್ಧೆ ಲಕ್ಷ್ಮಿ ಅವರನ್ನು ಬುಧವಾರ ಸಂಜೆ ಅವರ ಮಗ ಸುಳ್ಯ ಬಸ್ ನಿಲ್ದಾಣದಲ್ಲಿ ಬಿಟ್ಟು ತೆರಳಿದರೆನ್ನಲಾಗಿದೆ. ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದ ಬಳಿ ಅನಾಥವಾಗಿ ಕುಳಿತಿದ್ದ ಲಕ್ಷ್ಮಿ ಅವರನ್ನು ಬೆನಕ ಕಲಾ ಮತ್ತು ಕ್ರೀಡಾ ಸಂಘದವರು ಉಪಚರಿಸಿ ಬಳಿಕ ಸಾಂತ್ವಾನ ಕೇಂದ್ರದ ವಶಕ್ಕೆ ಒಪ್ಪಿಸಿದರು. ಲಕ್ಷ್ಮಿ ಅವರಿಗೆ ಮೂವರು ಗಂಡು ಮಕ್ಕಳಿದ್ದು, ಭೂಸುದಾರಣೆ ಕಾಯ್ದೆಯಡಿ ಅವರ ಕುಟುಂಬಕ್ಕೆ ಸುಮಾರು ಮೂರು ಎಕರೆ ಗದ್ದೆ ಮಂಜೂರಾಗಿತ್ತು. ಅದರಲ್ಲಿ ಅಡಿಕೆ ತೋಟ ಮಾಡಿ ಕುಟುಂಬ ಆರ್ಥಿಕವಾಗಿ ಒಳ್ಳೆಯ ಸ್ಥಿತಿಯಲ್ಲಿತ್ತು. ಅವರ ಹಿರಿ ಮಗ ಧರ್ಮಸ್ಥಳದಲ್ಲಿ ಪ್ರತ್ಯೇಕ ಜಮೀನು ಖರೀದಿಸಿದ್ದು ಅಲ್ಲೇ ವಾಸವಾಗಿದ್ದಾರೆ. ಕೊನೆಯವ ಮುಳ್ಯದಲ್ಲಿ ಹೊಸದಾಗಿ ಮನೆ ಕಟ್ಟಿಸಿದ್ದು, ಪ್ರಕರಣವೊಂದದಲ್ಲಿ ನ್ಯಾಯಾಂಗ ವಶದಲ್ಲಿದ್ದಾನೆ. ತಮ್ಮ ಜಮೀನನ್ನು ಅಡಮಾನವಿಟ್ಟು ಅದೀಗ ಇನ್ನೊಬ್ಬರ ವಶದಲ್ಲಿದೆ ಎನ್ನುತ್ತಾರೆ ಲಕ್ಷ್ಮಿ. ಮನೆಯಲ್ಲಿ ಸೊಸೆಯಂದಿರು ಅನ್ನ ನೀಡದೆ ಹೊರಗೆ ಹಾಕಿದ್ದಾಗಿ ಅವರು ದೂರುತ್ತಾರೆ.
ಗುರುವಾರ ಪುತ್ತೂರು ಸಹಾಯಕ ಕಮೀಷನರ್ ಸುಳ್ಯಕ್ಕೆ ಬಂದಾಗ ಸಾಂತ್ವಾನ ಕೇಂದ್ರದವರು ಮತ್ತು ಬೆನಕ ಕಲಾ ಮತ್ತು ಕ್ರೀಡಾ ಸಂಘದವರು ಅವರಿಗೆ ಘಟನೆ ಕುರಿತು ತಿಳಿಸಿದ್ದು, ವೃದ್ಧೆಗೆ ಆಶ್ರಯದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಸಾಂತ್ವಾನ ಕೇಂದ್ರಕ್ಕೆ ಒಪ್ಪಿಸಲು ಅವರು ಸೂಚನೆ ನೀಡದರೆಂದು ತಿಳಿದು ಬಂದಿದೆ.