ಉಪ್ಪಿನಂಗಡಿ: ಸರ್ಕಾರಿ ನೌಕರರನ್ನು ಎನ್‌ಪಿಎಸ್ ಗೆ ಸೇರ್ಪಡೆಗೊಳಿಸಿರುವುದನ್ನು ಖಂಡಿಸಿ, ಅಂಚೆ ಕಾರ್ಡ್ ಚಳವಳಿ
ಉಪ್ಪಿನಂಗಡಿ: ಸರ್ಕಾರಿ ನೌಕರರನ್ನು ಎನ್‌ಪಿಎಸ್(ಹೊಸ ಪಿಂಚಣಿ ಯೋಜನೆ)ಗೆ ಸೇರ್ಪಡೆಗೊಳಿಸಿರುವುದನ್ನು ಖಂಡಿಸಿ, ಈ ಯೋಜನೆ ಅನುಷ್ಠಾನಕ್ಕೆ ತಂದ ದಿನವಾದ ಎಪ್ರಿಲ್ 1ರಂದು ಈ ಯೋಜನೆಗೊಳಪಟ್ಟ ಸರಕಾರಿ ನೌಕರರ ಸಂಘವು ಅಂಚೆ ಕಾರ್ಡ್ ಚಳವಳಿಗೆ ಕರೆನೀಡಿದ್ದು, ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿಯೂ ಸರಕಾರಿ ನೌಕರರು ಅಂಚೆ ಕಾರ್ಡ್ ಚಳವಳಿ ನಡೆಸಿ, ಕಪ್ಪು ಬ್ಯಾಡ್ಜ್ ಹಾಕಿ ಕೆಲಸ ಮಾಡುವ ಮೂಲಕ ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದರು.
ಇಲ್ಲಿನ ಅಂಚೆಕಚೇರಿ ಬಳಿ ಶುಕ್ರವಾರ ಮಧ್ಯಾಹ್ನ ಆಗಮಿಸಿದ ಎನ್‌ಪಿಎಸ್ ಯೋಜನೆಗೊಳಪಟ್ಟ ಉಪ್ಪಿನಂಗಡಿ ವಲಯದ ಸರಕಾರಿ ನೌಕರರು, ಈ ಯೋಜನೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿ, ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಯವರಿಗೆ ಅಂಚೆ ಕಾರ್ಡ್ ಚಳವಳಿ ಮೂಲಕ ಬೇಡಿಕೆ ಮಂಡಿಸಿದರು. ಈ ಸಂದರ್ಭ ಮಾತನಾಡಿದ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಪುತ್ತೂರು ತಾಲೂಕು ಘಟಕದ ಪದಾಧಿಕಾರಿ ರಮೇಶ್, ಎನ್‌ಪಿಎಸ್ ಯೋಜನೆಯು ಗೊಂದಲದ ಗೂಡಾಗಿದ್ದು, ಇದರಿಂದ ಎನ್‌ಪಿಎಸ್‌ಗೊಳಪಟ್ಟ ನೌಕರರು ಅತಂತ್ರ ಸ್ಥಿತಿಯಲ್ಲಿರುವಂತಾಗಿದೆ.
ಎನ್‌ಪಿಎಸ್‌ಗೊಳಪಟ್ಟ ನೌಕರನಿಗೆ ನಿವೃತಿಯ ಅವಧಿಯಲ್ಲಿ ದೊರೆಯುವ ಮೊತ್ತ ಷೇರುಮಾರುಕಟ್ಟೆಯ ಮೇಲೆ ಅವಲಂಭಿತವಾಗಿದ್ದು, ಷೇರು ಮಾರುಕಟ್ಟೆ ಕುಸಿದರೆ, ನೌಕರರೂ ಸಂಕಷ್ಟಕ್ಕೀಡಾಗುವ ಸಂಭವವಿದೆ. ರಾಜ್ಯದಲ್ಲಿ ಸುಮಾರು 700ಕ್ಕೂ ಹೆಚ್ಚು ಎನ್‌ಪಿಎಸ್‌ಗೊಳಪಟ್ಟ ನೌಕರರು ಮರಣ ಹೊಂದಿದ್ದು, ಕೆಲಸದ ಅವಧಿಯಲ್ಲಿ ಕಡಿತಗೊಂಡ ಯಾವುದೇ ಹಣವೂ ಅವರಿಗೆ ಪಿಂಚಣಿ ರೂಪದಲ್ಲಿ ಸಿಕ್ಕಿಲ್ಲ. ಜೊತೆಗೆ ಪರಿಹಾರ ಕೂಡಾ ಸಿಕ್ಕಿಲ್ಲ. ಆದ್ದರಿಂದ ಈ ಯೋಜನೆಯನ್ನು ವಿರೋಧಿಸದಿದ್ದಲ್ಲಿ ಮುಂದೊಂದು ದಿನ ನಮಗೂ ಇದೇ ಸ್ಥಿತಿ ಬರುವ ಸಂಭವವಿದೆ. ಆದ್ದರಿಂದ ಕೂಡಲೇ ಸರಕಾರಗಳು ಎನ್‌ಪಿಎಸ್ ಅನ್ನು ಕೈಬಿಟ್ಟು ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರಲ್ಲದೆ, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ನೌಕರರು ಸಂಘಟನಾತ್ಮಕವಾಗಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಅಂಚೆ ಕಾರ್ಡ್ ಚಳವಳಿಯಲ್ಲಿ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಪುತ್ತೂರು ತಾಲೂಕು ಘಟಕದ ಪದಾಧಿಕಾರಿಗಳಾದ ಮುಹಮ್ಮದ್ ಶರೀಫ್, ಹರಿಣಾಕ್ಷಿ, ಚಂದ್ರಕಾಂತ್, ಕೃಷ್ಣವೇಣಿ, ಅಬ್ದುಲ್ಲಾ ಅಸಾಫ್, ಪೂರ್ಣಿಮ, ಮೋಹನ್ ಚಂದ್ರ ಸೇರಿದಂತೆ ಆರೋಗ್ಯ ಇಲಾಖೆ, ಶಿಕ್ಷಣ ಸಂಸ್ಥೆ, ಪಂಚಾಯತ್‌ನ ಸುಮಾರು 22 ಮಂದಿ ನೌಕರರು ಪಾಲ್ಗೊಂಡಿದ್ದರು.