ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ,ಉಗಿದರೆ 500 ರೂ.ದಂಡ

Update: 2016-04-01 13:38 GMT

ಲಕ್ನೋ,ಎ.1: ನವಾಬರ ನಗರಿ ಎಂದೇ ಹೆಸರಾಗಿರುವ ಲಕ್ನೋದಲ್ಲಿ ಪೌರ ನಿಯಮಾವಳಿಗಳ ಉಲ್ಲಂಘನೆ ಇನ್ನು ಮುಂದೆ ಸಾರ್ವಜನಿಕರಿಗೆ ದುಬಾರಿಯಾಗಲಿದೆ. ಎಲ್ಲೆಂದರಲ್ಲಿ,ರಸ್ತೆಗಳಲ್ಲಿ ಮೂತ್ರ ವಿಸರ್ಜಿಸಿದರೆ,ಉಗಿದರೆ ಮತ್ತು ಕಸ ಚೆಲ್ಲಿದರೆ ಸ್ಥಳದಲ್ಲಿಯೇ 500 ರೂ.ದಂಡ ವಿಧಿಸಲು ಲಕ್ನೋ ಮಹಾನಗರ ಪಾಲಿಕೆಯು ನಿರ್ಧರಿಸಿದೆ. ಇದಕ್ಕಾಗಿ ಮನಪಾದ ಸಭೆಯಲ್ಲಿ ಮಸೂದೆಯೊಂದನ್ನು ಅಂಗೀಕರಿಸಲಾಗಿದೆ.

ಈ ಹಿಂದೆಯೂ ಇಂತಹ ತಪ್ಪೆಸಗುವವರನ್ನು ಹಿಡಿದು 50 ರೂ.ದಂಡವನ್ನು ವಸೂಲು ಮಾಡಲಾಗುತ್ತಿತ್ತು. ಆದರೆ ಜನರು ಸುಧಾರಿಸಿಕೊಂಡಿರಲಿಲ್ಲ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ,ಉಗಿಯುವುದು ಇತ್ಯಾದಿ ನಡೆಯುತ್ತಲೇ ಇದ್ದವು.

ಇಷ್ಟೇ ಅಲ್ಲ,ಬೆಳಿಗ್ಗೆ ಎದ್ದು ತಂಬಿಗೆ ಹಿಡಿದುಕೊಂಡು ಬಯಲು ಶೌಚಕ್ಕೆ ತೆರಳುವವರೂ ಇನ್ನು ಮುಂದೆ ದುಡ್ಡನ್ನೂ ಹಿಡಿದುಕೊಂಡು ಹೋಗಬೇಕು. ಏಕೆಂದರೆ ಸಿಕ್ಕಿ ಬಿದ್ದರೆ ಅವರೂ 500 ರೂ.ದಂಡ ಕಕ್ಕಬೇಕು. ಅಲ್ಲದೆ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳನ್ನು ಎಸೆದು ಚರಂಡಿಗಳು ಕಟ್ಟಿಕೊಳ್ಳಲು ಕಾರಣರಾಗುವವರಿಗೂ ಸ್ಥಳದಲ್ಲೇ 500 ರೂ.ದಂಡ ವಿಧಿಸಲು ಮನಪಾ ನಿರ್ಧರಿಸಿದೆ.

ಇದೇ ರೀತಿ ಬಸ್ ನಿಲ್ದಾಣಗಳಲ್ಲಿ ಬಹಿರಂಗವಾಗಿ ಮೂತ್ರ ವಿಸರ್ಜಿಸುವವರ ಮೇಲೆ ಕಣ್ಣಿಡಲು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಮುಖ ನಗರಗಳಲ್ಲಿಯ ತನ್ನ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News