ದಕ್ಷಿಣ ಚೀನಾ ಸಮುದ್ರದಲ್ಲಿ ಎಚ್ಚರಿಕೆಯಿಂದಿರಿ: ಅಮೆರಿಕಕ್ಕೆ ಚೀನಾ ಎಚ್ಚರಿಕೆ
ಬೀಜಿಂಗ್, ಎ. 1: ದಕ್ಷಿಣ ಚೀನಾ ಸಮುದ್ರದಲ್ಲಿ ‘‘ಎಚ್ಚರಿಕೆಯಿಂದ ಇರಿ’’ ಎಂಬ ಎಚ್ಚರಿಕೆಯನ್ನು ಚೀನಾದ ರಕ್ಷಣಾ ಸಚಿವಾಲಯ ಗುರುವಾರ ಅಮೆರಿಕದ ನೌಕಾಪಡೆಗೆ ನೀಡಿದೆ ಹಾಗೂ ಅಮೆರಿಕ ಮತ್ತು ಫಿಲಿಪ್ಪೀನ್ಸ್‌ಗಳ ನಡುವೆ ಹೊಸದಾಗಿ ಏರ್ಪಟ್ಟ ಒಪ್ಪಂದವನ್ನು ಖಂಡಿಸಿದೆ.
ಐದು ಸೇನಾ ನೆಲೆಗಳಿಗೆ ಅಮೆರಿಕ ಪಡೆಗಳಿಗೆ ಪ್ರವೇಶ ನೀಡಲು ಈ ತಿಂಗಳ ಆರಂಭದಲ್ಲಿ ಫಿಲಿಪ್ಪೀನ್ಸ್ ಒಪ್ಪಿಕೊಂಡಿತ್ತು. ಈ ಸೇನಾ ನೆಲೆಗಳ ಪೈಕಿ ಕೆಲವು ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದಲ್ಲಿವೆ. ಈ ಸಮುದ್ರದ ಮೇಲೆ ಚೀನಾ ಹಕ್ಕು ಸ್ಥಾಪಿಸುತ್ತಿದೆ ಹಾಗೂ ಈ ಸರಹದ್ದಿನ ಇತರ ದೇಶಗಳೂ ಇದೇ ಪ್ರದೇಶಗಳ ಮೇಲೆ ತಮ್ಮ ಹಕ್ಕುಗಳನ್ನು ಸ್ಥಾಪಿಸುತ್ತಿರುವುದನ್ನು ಸ್ಮರಿಸಬಹುದಾಗಿದೆ. ಹಾಗಾಗಿ, ಈ ಪ್ರದೇಶದಲ್ಲಿ ಉದ್ವಿಗ್ನತೆ ತಲೆದೋರಿದೆ.
ಇಡೀ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ತನ್ನ ಆಧಿಪತ್ಯವನ್ನು ಪ್ರತಿಪಾದಿಸುತ್ತಿದೆ. ಅದೇ ವೇಳೆ, ಇದೇ ಪ್ರದೇಶಗಳ ಮೇಲೆ ಬ್ರೂನೆ, ಮಲೇಶ್ಯ, ವಿಯೆಟ್ನಾಂ, ತೈವಾನ್ ಮತ್ತು ಫಿಲಿಪ್ಪೀನ್ಸ್‌ಗಳೂ ಸಮಾನಾಂತರ ಹಕ್ಕು ಸ್ಥಾಪಿಸುತ್ತಿವೆ. ಚೀನಾ ಇತ್ತೀಚಿನ ತಿಂಗಳುಗಳಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಕೆಲವು ಕೃತಕ ದ್ವೀಪಗಳನ್ನು ನಿರ್ಮಿಸುತ್ತಿದೆ ಹಾಗೂ ಇಂಥ ಕೆಲವು ದ್ವೀಪಗಳಲ್ಲಿ ರನ್‌ವೇಗಳಿವೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕ ಗಸ್ತು ನಡೆಸುತ್ತಿದೆ ಎಂಬ ಇತ್ತೀಚಿನ ವರದಿಗಳ ಬಗ್ಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಯಾಂಗ್ ಯುಜುನ್, ‘‘ಎಚ್ಚರಿಕೆಯಿಂದಿರಿ ಎಂಬ ಸಂದೇಶವನ್ನಷ್ಟೇ ನಾನು ಅಮೆರಿಕದ ನೌಕೆಗಳಿಗೆ ನೀಡಬಲ್ಲೆ’’ ಎಂದರು.