ಕಡಿಮೆ ತೂಕದವರಿಗಿಂತ ಸ್ಥೂಲ ದೇಹಿಗಳ ಸಂಖ್ಯೆ ಹೆಚ್ಚು
ಲಂಡನ್, ಎ. 1: ಪ್ರಪಂಚದಲ್ಲಿ ಈಗ 64 ಕೋಟಿಗೂ ಅಧಿಕ ಸ್ಥೂಲದೇಹಿಗಳಿದ್ದಾರೆ ಹಾಗೂ ಕಡಿಮೆ ತೂಕ ಹೊಂದಿದವರಿಗಿಂತ ಅಧಿಕ ತೂಕ ಹೊಂದಿದವರ ಸಂಖ್ಯೆ ಈಗ ಹೆಚ್ಚಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಕಳೆದ 40 ವರ್ಷಗಳ ಅವಧಿಯಲ್ಲಿ ಸ್ಥೂಲದೇಹಿಗಳ ಸಂಖ್ಯೆಯಲ್ಲಿ ಗಾಬರಿ ಹುಟ್ಟಿಸುವಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) 30ನ್ನು ಮೀರಿದವರ ಜನರ ಸಂಖ್ಯೆ 1975ರಲ್ಲಿ ಇದ್ದ 10.5 ಕೋಟಿಯಿಂದ 2014ರಲ್ಲಿ 64.1 ಕೋಟಿಗೆ ಏರಿಕೆಯಾಗಿದೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ.
10 ಪುರುಷರಲ್ಲಿ ಒಂದಕ್ಕಿಂತಲೂ ಅಧಿಕ ಹಾಗೂ ಏಳು ಮಹಿಳೆಯರಲ್ಲಿ ಒಬ್ಬರು ಸ್ಥೂಲದೇಹಿಗಳಾಗಿದ್ದಾರೆ.
‘‘ಅತಿ ತೂಕದಿಂದ ಆರೋಗ್ಯ ಸಮಸ್ಯೆಗೆ ಗುರಿಯಾಗುತ್ತಿರುವವರ ಸಂಖ್ಯೆ ಜಗತ್ತಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ’’ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜ್‌ನಲ್ಲಿ ಸಾರ್ವಜನಿಕ ಆರೋಗ್ಯ ಶಾಲೆಯ ಪ್ರೊಫೆಸರ್ ಮಜೀದ್ ಎಝಾಟಿ ಹೇಳುತ್ತಾರೆ.
ಬಿಎಂಐ ಲೆಕ್ಕ ಮಾಡುವುದು ಹೇಗೆ?
ವ್ಯಕ್ತಿಯ ತೂಕವನ್ನು ಕಿಲೋಗ್ರಾಂನಲ್ಲಿ ಹಾಗೂ ಎತ್ತರವನ್ನು ಮೀಟರ್‌ನಲ್ಲಿ ಅಳೆಯಬೇಕು. ಈಗ ತೂಕವನ್ನು ಎತ್ತರದ ವರ್ಗ (ಸ್ಕ್ವೇರ್)ದಿಂದ ಭಾಗಿಸಬೇಕು. ಬರುವ ಭಾಗಲಬ್ಧವೇ ಆ ವ್ಯಕ್ತಿಯ ಬಿಎಂಐ. ಬಿಎಂಐ 19 ಮತ್ತು 25ರ ನಡುವೆ ಇದ್ದರೆ ಅದು ಆರೋಗ್ಯಕರವಾಗಿದೆ. 25ಕ್ಕಿಂತ ಅಧಿಕವಿದ್ದರೆ ಅತಿ ತೂಕ, 30ಕ್ಕಿಂತ ಅಧಿಕವಿದ್ದರೆ ಬೊಜ್ಜು ಹಾಗೂ 40ಕ್ಕಿಂತಲು ಅಧಿಕವಿದ್ದರೆ ಭಯಾನಕ ಬೊಜ್ಜು.