ಎನ್‌ಟಿಎಸ್‌ಇ ಪರೀಕ್ಷೆ: ಅಲೋಶಿಯಸ್‌ನ ಇಬ್ಬರು ವಿದ್ಯಾರ್ಥಿಗಳಿಗೆ ರ್ಯಾಂಕ್
Update: 2016-04-01 23:42 IST
ಮಂಗಳೂರು, ಎ.1: ರಾಷ್ಟ್ರಮಟ್ಟದ ವಿಜ್ಞಾನ ಪ್ರತಿಭಾ ಪರೀಕ್ಷೆ(ಎನ್‌ಟಿಎಸ್‌ಇ)ಯಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಮತ್ತು ತೃತೀಯ ರ್ಯಾಂಕ್ ಗಳಿಸಿದ್ದಾರೆ. ಜನವರಿಯಲ್ಲಿ ಎನ್‌ಟಿಎಸ್‌ಇ ಪರೀಕ್ಷೆ ನಡೆದಿದ್ದು, ರಾಜ್ಯ ಮಟ್ಟದಲ್ಲಿ ದ್ವಿತೀಯ ಪಿಯುಸಿಯ ಪಿಸಿಎಂಬಿ ವಿದ್ಯಾರ್ಥಿ ಅಶ್ವಿನ್ ದತ್ತಾತ್ರೇಯ ಶೆಣೈ ಪ್ರಥಮ ಹಾಗೂ ವಿವೇಕ್ ತೃತೀಯ ರ್ಯಾಂಕ್ ಹಾಗೂ ರಾಷ್ಟ್ರ ಮಟ್ಟದಲ್ಲಿ ಅನುಕ್ರಮವಾಗಿ 128 ಹಾಗೂ 203ನೆ ರ್ಯಾಂಕ್‌ಗಳನ್ನು ಪಡೆದಿದ್ದಾರೆ. ಇದೇ ವೇಳೆ ಕಾಲೇಜಿನ ದ್ವಿತೀಯ ಪಿಯುಸಿಯ ಪಿಸಿಎಂಇ ವಿಭಾಗದ ಅಶ್ಲೆ ಕೆವಿನ್ ಡಿಸೋಜ ಈ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 421ನೆ ರ್ಯಾಂಕ್ ಹಾಗೂ ಕಾಲೇಜಿನ ಪ್ರಥಮ ಪಿಯುಸಿಯ ಪಿಸಿಎಂಬಿ ವಿಭಾಗದ ಅಬ್ದುಲ್ ಬಾಶಿತ್ ಅಶ್ರಫ್ 458ನೆ ರ್ಯಾಂಕ್ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.