ತುಳುನಾಡಿನಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದ ಸ್ಮರಣೆ: 5ರಂದು ಮಂಗಳೂರಿನಲ್ಲಿ ಮೆರವಣಿಗೆ
ಮಂಗಳೂರು,ಎ.1: ದೇಶದ ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೆ ಮುಂಚೆಯೇ ತುಳುನಾಡಿನಲ್ಲಿ 1837ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ನೆನಪಿನಲ್ಲಿ ವಿವಿಧ ತುಳು ಸಂಘಟನೆಗಳ ನೇತೃತ್ವದಲ್ಲಿ ಎ.5ರಂದು ಬೆಳಗ್ಗೆ 10ಕ್ಕೆ ನಗರದ ಜ್ಯೋತಿ ವೃತ್ತದಿಂದ ಬಾವುಟಗುಡ್ಡೆಯವರೆಗೆ ಬೃಹತ್ ಮೆರವಣಿಗೆ ಆಯೋಜಿಸಲಾಗಿದೆ ಎಂದು ತುಳುನಾಡ ರಕ್ಷಣ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.
1837ರ ಎ.5ರಂದು ಕೆದಂಬಾಡಿ ರಾಮೇಗೌಡರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಬ್ರಿಟಿಷರನ್ನು ಮಣಿಸಿ ತುಳು ಬಾವುಟ ಹಾರಿಸಲಾಗಿತ್ತು. 16 ದಿನಗಳ ಕಾಲ ನಡೆದ ಹೋರಾಟದ ಬಳಿಕ ತುಳುನಾಡು ಸ್ವಾತಂತ್ರವನ್ನು ಪಡೆದಿದ್ದು, ನಂತರ ಬ್ರಿಟಿಷರು ಈ ಹೋರಾಟಗಾರರನ್ನು ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಿದ್ದರು. ಗಲ್ಲಿಗೇರಿಸಿದ ಹಲವು ದಿನಗಳ ಕಾಲ ಹೋರಾಟಗಾರರ ಮೃತದೇಹ ನೇತಾಡುತ್ತಿದ್ದು, ರಣಹದ್ದುಗಳು ದೇಹವನ್ನು ತಿನ್ನುತ್ತಿದ್ದವು. ಈ ಪ್ರದೇಶ ‘ಭೀಕರ ಮರಣಕಟ್ಟೆ’ ಎಂದು ಕರೆಯಲ್ಪಟ್ಟು ನಂತರ ಬಿಕರ್ನಕಟ್ಟೆಯೆಂದು ಕರೆಯಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಎ.5ರಂದು ಬಾವುಟಗುಡ್ಡೆಯಲ್ಲಿ ತುಳುಬಾವುಟ ಹಾರಿಸಲಾಗುವುದು. ಸಂಜೆ 3:30ಕ್ಕೆ ತುಳು ಅಕಾಡಮಿಯ ಸಹಯೋಗದಲ್ಲಿ ತುಳು ಅಕಾಡಮಿ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹೇಂದ್ರನಾಥ್ ಸಾಲೆತ್ತೂರು, ಮುನೀರ್, ಪ್ರಶಾಂತ್, ಸಿರಾಜ್, ಆನಂದ್ ಅಮೀನ್ ಅಡ್ಯಾರ್, ಜ್ಯೋತಿಕಾ ಜೈನ್, ಅಬ್ದುರ್ರಶೀದ್ ಮೊದಲಾವರು ಉಪಸ್ಥಿತರಿದ್ದರು.