ಈತ ಭಾರತದ ಚಾರ್ಲ್ಸ್ ಶೋಭರಾಜ್ !
ಹೊಸದಿಲ್ಲಿ, ಎ. 2: ಈತನಿಗೆ ಬರೋಬ್ಬರಿ 77 ವರ್ಷ. ಈತನ ಮೇಲೆ 127 ಅಪರಾಧ ಪ್ರಕರಣಗಳಿವೆ. ಧನಿರಾಮ್ ಮಿತ್ತಲ್ ಎನ್ನುವುದು ಈತನ ಅಪರಾಧಿ ಹೆಸರು. ಆದರೆ ಪೊಲೀಸ್ ದಾಖಲೆಗಳ ಪ್ರಕಾರ, ಈತ ಸೂಪರ್ ಸಟ್ವರ್‌ಲಾಲ್ ಹಾಗೂ ಇಂಡಿಯನ್ ಚಾರ್ಲ್ಸ್ ಶೋಭರಾಜ್!
ಮಿತ್ತಲ್ ಕಳೆದ ವರ್ಷ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಶುಕ್ರವಾರ ಕದ್ದ ಸ್ಯಾಂಟ್ರೊ ಕಾರು ಚಲಾಯಿಸುತ್ತಿದ್ದಾಗ ಮತ್ತೆ ಆತನನ್ನು ಬಂಧಿಸಲಾಗಿದೆ.
1961ರಲ್ಲಿ ಮೊದಲ ಅಪರಾಧ ಕೃತ್ಯ ಎಸಗಿದ ಆತ ಆರು ದಶಕಗಳಿಂದ ಈ ದಂಧೆ ನಡೆಸುತ್ತಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ದೆಹಲಿ ಹೊರವಲಯದ ನರೇಲಾದಲ್ಲಿ ವಾಸವಿರುವ ಈತ ತನ್ನ ಜಾಯಮಾನ ಬದಲಿಸಿಕೊಂಡಿಲ್ಲ. ಚಂಡೀಗಢದ ವಕೀಲರೊಬ್ಬರ ಕಾರು ಕದ್ದ ಆರೋಪದಲ್ಲಿ ಪಶ್ಚಿಮ ಜಿಲ್ಲಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಈತ ಕಾನೂನು ಪದವೀಧರ. 1968-74ರ ಅವಧಿಯಲ್ಲಿ ಸುಳ್ಳು ದಾಖಲೆ ನೀಡಿ, ಸ್ಟೇಷನ್ ಮಾಸ್ಟರ್ ಆಗಿ ಸೇವೆಯಲ್ಲಿದ್ದ. ಈ ಅವಧಿಯಲ್ಲಿ ಚಾಲನಾ ಲೈಸನ್ಸ್ ಮತ್ತು ರಿಜಿಸ್ಟ್ರೇಷನ್ ದಾಖಲೆಗಳನ್ನು ನಕಲಿ ಮಾಡಿ ವಂಚಿಸುತ್ತಿದ್ದ. ತನ್ನ ವಿರುದ್ಧದ ಪ್ರಕರಣಗಳಲ್ಲಿ ತಾನೇ ವಾದಿಸುತ್ತಿದ್ದ ಎಂದು ಡಿಸಿಪಿ ಪುಷ್ಪೇಂದ್ರ ವಿವರಿಸಿದ್ದಾರೆ.
1970ರಲ್ಲಿ ರಾಜಸ್ಥಾನದಿಂದ ಕಾನೂನು ಪದವಿ ಪಡೆದ. ಬಳಿಕ ಕೊಲ್ಕತ್ತಾದಲ್ಲಿ ಸುಳ್ಳು ಪತ್ತೆ ಪರೀಕ್ಷೆಯ ಕೋರ್ಸ್ ಮಾಡಿದ. ಪಟಿಯಾಲಾ ಹೌಸ್ ಕೋರ್ಟ್‌ನಲ್ಲಿ ಮುನೀಮ್ ಆಗಿ ಕಾರ್ಯನಿರ್ವಹಿಸಿ ಬಳಿಕ ರೋಹ್ಟಕ್ ಹಾಗೂ ದೆಹಲಿ ನ್ಯಾಯಾಲಯಗಳಲ್ಲಿ ವಕೀಲನಾಗಿದ್ದ. ಒಮ್ಮೆ ಝಜ್ಜಾರ್ ಜಿಲ್ಲೆಯಲ್ಲಿ ನಕಲಿ ನ್ಯಾಯಾಧೀಶನಾಗಿ ಎರಡು ತಿಂಗಳ ಕಾಲ ಕೆಲಸ ಮಾಡಿದ್ದ. ಈ ಅವಧಿಯಲ್ಲಿ ಹಲವು ಅಪರಾಧಿಗಳನ್ನೂ ಬಿಡುಗಡೆ ಮಾಡಿದ್ದ.
ಹಲವು ಮಂದಿ ಸ್ನೇಹಿತರಿಗೆ ವಕೀಲನಾಗಿಯೂ ಸಹಾಯ ಮಾಡಿದ್ದು, ಜತೆಗೆ ದೆಹಲಿ, ಹರ್ಯಾಣ, ರಾಜಸ್ಥಾನ, ಚಂಡೀಗಢ ಹಾಗೂ ಪಂಜಾಬ್‌ನಿಂದ ಕಾರುಗಳನ್ನೂ ಕದಿಯುತ್ತಿದ್ದ ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ.