×
Ad

ಬ್ರಹ್ಮರಕೂಟ್ಲು ಬ್ರಹ್ಮಸನ್ನಿಧಿ ಉಳಿಸಿ ಚತುಷ್ಪಥ ಕಾಮಗಾರಿ ಮುಂದುವರಿಸಲು ಕೇಂದ್ರ ಸಚಿವರಿಗೆ ಮನವಿ

Update: 2016-04-02 10:29 IST

ವಿಟ್ಲ, ಎ.2: ರಾಷ್ಟ್ರೀಯ ಹೆದ್ದಾರಿ-73 ರ ಬ್ರಹ್ಮರ ಕೂಟ್ಲು ಬ್ರಹ್ಮಸನ್ನಿಧಿಯ ಬಳಿ ಹೆದ್ದಾರಿ ಚತುಷ್ಪಥ ಕಾಮಗಾರಿ ಇನ್ನೂ ಅಪೂರ್ಣ ಸ್ಥಿತಿಯಲ್ಲಿದ್ದು, ಅದನ್ನು ಯಥಾಸ್ಥಿತಿ ಉಳಿಸಿಕೊಂಡು ಕಾಮಗಾರಿ ಪೂರ್ತಿಗೊಳಿಸುವಂತೆ ಕಳ್ಳಿಗೆ ಗ್ರಾ ಪಂ ಉಪಾಧ್ಯಕ್ಷ ಪುರುಷ ಎನ್ ಸಾಲಿಯಾನ್ ಅವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ಸಚಿವ ಗಡ್ಕರಿ ಮಂಗಳೂರಿಗೆ ಬಂದಿದ್ದ ವೇಳೆ ನೀಡಿದ ಈ ಮನವಿಯಲ್ಲಿ ಬ್ರಹ್ಮರಕೂಟ್ಲು ಟೋಲ್‌ಪ್ಲಾಝಾ ಬಳಿ ಜನರ ಅನುಕೂಲಕ್ಕಾಗಿ ರಸ್ತೆಯ ಎರಡು ಬದಿ ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣ ಸೇರಿದಂತೆ ಕಳ್ಳಿಗೆ ಗ್ರಾಮದಲ್ಲಿ ದರಿಬಾಗಿಲು, ನೆತ್ರಕೆರೆ, ಜಾರಂದಗುಡ್ಡೆ, ಕನಪಾಡಿ, ಬೆದ್ರಾಡಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರ ಯೋಗ್ಯವಲ್ಲದ ಸ್ಥಿತಿಗೆ ಮುಟ್ಟಿದ್ದು, ಇವುಗಳ ದುರಸ್ತಿಗೂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಯುಪಿಎ ಸರಕಾರದ ಅವಧಿಯಲ್ಲಿ ಪ್ರಾರಂಭಗೊಂಡ ಈ ಚತುಷ್ಪಥ ಕಾಮಗಾರಿ ಆಮೆಗತಿಯಲ್ಲಿ ಸಾಗಿ ಬಂದಿದ್ದು, ಬ್ರಹ್ಮರಕೂಟ್ಲು ಬ್ರಹ್ಮ ಸನ್ನಿಧಿ ಬಳಿ ಹೆದ್ದಾರಿ ಪ್ರಾಧಿಕಾರ ಹಾಗೂ ಸಾರ್ವಜನಿಕರ ನಡುವಿನ ಹೊಂದಾಣಿಕೆ ಕೊರೆತೆಯಿಂದ ಕಳೆದ ಎಂಟು ವರ್ಷಗಳಿಂದ ಚತುಷ್ಪಥ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

ಇದರಿಂದಾಗಿ ಇಲ್ಲಿ ಏಕಮುಖ ಸಂಚಾರ ವ್ಯವಸ್ಥೆಯೇ ಇನ್ನೂ ಚಾಲ್ತಿಯಲ್ಲಿದ್ದು, ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಈಗಾಗಲೇ ಈ ಬಗ್ಗೆ ಗ್ರಾಮ ಪಂಚಾಯತ್‌ಗೆ ಹಲವಾರು ದೂರುಗಳು ನೀಡಲಾಗಿದೆ. ಈ ಕಾರಣದಿಂದ ಸಚಿವರು ತಕ್ಷಣ ಇಲ್ಲಿನ ಬ್ರಹ್ಮ ಸನ್ನಿಧಿಯನ್ನು ಉಳಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಬೇಕೆಂದು ಸಾಲಿಯಾನ್ ಸಚಿವ ಗಡ್ಕರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News