ಸುಳ್ಯ: ಕೆಎಫ್‌ಡಿಸಿ ಕಾರ್ಮಿಕರಿಗೆ ದಿನಗೂಲಿ ಹೆಚ್ಚಳ
ಸುಳ್ಯ: ಕೆಎಫ್‌ಡಿಸಿಯಲ್ಲಿ ದಿನಗೂಲಿ ನೆಲೆಯಲ್ಲಿ ದುಡಿಯುತ್ತಿರುವ ಕಾರ್ಮಿಕರ ವೇತನವನ್ನು 288 ರೂಪಾಯಿಯಿಂದ 432 ರೂಪಾಯಿಗೆ ಹೆಚ್ಚಳ ಮಾಡಿ ನಿಗಮದ ಆಡಳಿತ ನಿರ್ದೇಶಕರು ಆದೇಶ ಹೊರಡಿಸಿದ್ದು, ಇದನ್ನು ಕಾರ್ಮಿಕ ಸಂಘಟನೆಗಳು ಸ್ವಾಗತಿಸಿವೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಪ್ಲಾಂಟೇಶನ್ ಮತ್ತು ವರ್ಕರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಶಿವಕುಮಾರ್ ಕೌಡಿಚ್ಚಾರ್ ಅರಣ್ಯ ಸಚಿವ ಬಿ.ರಮಾನಾಥ ರೈ ಹಾಗೂ ನಿಗಮದ ಅಧ್ಯಕ್ಷ ಅಶೋಕ್ ಕುಮಾರ್ ಸಿಂಗ್ ಅವರನ್ನು ಅಭಿನಂದಿಸಿದ್ದಾರೆ. ವೇತನ ಹೆಚ್ಚಳ ಕುರಿತಂತೆ ರಬ್ಬರ್ ಕಾರ್ಮಿಕರ 8 ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ಹಲವು ಬಾರಿ ಅಧಿಕಾರಿಗಳಿಗೆ, ಸಚಿವರಿಗೆ ಮನವಿಯನ್ನು ಮಾಡಿದ್ದರು. ನಿಗಮದ ಅಧಿಕಾರಿಗಳು ಈ ಕುರಿತು ಭರವಸೆಯನ್ನು ಮಾತ್ರ ನೀಡಿದ್ದರು. ಮಾರ್ಚಿ 29ರಂದು ನಡೆದ ನಿಗಮದ ನಿರ್ದೇಶಕರ ಸಭೆಯಲ್ಲಿ ಈ ಪ್ರಸ್ತಾವ ಚರ್ಚೆಗೆ ಬಂದರೂ ಯಾವುದೇ ನಿರ್ಧಾರಕ್ಕೆ ಬಾರದೆ ಮುಂದೂಡಲ್ಪಟ್ಟಿತ್ತು. ಇದರಿಂದ ಕಾರ್ಮಿಕ ಸಂಘಟನೆಗಳು ಸರ್ಕಾರದ ಮಟ್ಟದಲ್ಲಿ ಪ್ರಯತ್ನವನ್ನು ಮುಂದುವರಿಸಿದ್ದರು. 8 ಕಾರ್ಮಿಕ ಸಂಘಗಳ ಮುಖಂಡರು ಹಾಗೂ ಸುಮಾರು 150ಕ್ಕೂ ಮಿಕ್ಕು ಕಾರ್ಮಿಕರು ಬೆಂಗಳೂರಿಗೆ ತೆರಳಿ ಅರಣ್ಯ ಸಚಿವ ಬಿ.ರಮಾನಾಥ ರೈ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ತಕ್ಷಣ ಸ್ಪಂದಿಸಿದ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರಿಂದ ವೇತನ ಏರಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಹಿಂದೆ ರಬ್ಬರ್ ಟ್ಯಾಪಿಂಗ್‌ನೊಂದಿಗೆ ಕಳೆ ಕಟಾವು, ಪ್ಲಾಸ್ಟಿಕ್ ಹೊದಿಸುವುದು ಇತ್ಯಾದಿ ನಿರ್ವಹಣೆಗೆ ಪ್ರತ್ಯೇಕ ಕೂಲಿ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಪ್ಯಾಕೇಜ್ ರೂಪದಲ್ಲಿ ಪ್ರತಿ 150 ಮರದ ಜವಾಬ್ದಾರಿಯನ್ನು ಒಬ್ಬಬ್ಬ ಕಾರ್ಮಿಕರಿಗೆ ವಹಿಸಿಕೊಡಲಾಗಿದೆ. ಅದರ ಎಲ್ಲಾ ನಿರ್ವಹಣೆಯನ್ನೂ ಅತನೇ ಮಾಡಬೇಕಿದೆ. ಹಿಂದಿನಂತೆ ಭತ್ತೆ ಸೇರಿದರೆ ದಿನಗೂಲಿ 487 ರೂಪಾಯಿಗೆ ಏರಲಿದೆ ಎಂದರು. ಅರಣ್ಯ ಸಚಿವರ ಆಸಕ್ತಿಯಿಂದ ಹೊಸ ಒಪ್ಪಂದ ಏರ್ಪಟ್ಟಿದ್ದು, ಅದಕ್ಕಾಗಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಶಿವಕುಮಾರ್ ಹೇಳಿದರು.
ಕಾರ್ಮಿಕರಾದ ವಿಜಯಕುಮಾರಿ ಹಾಗೂ ರಮಣಿ ಅಮ್ಮ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.