×
Ad

ಕಾರ್ಕಳ : ಕಾಂಗ್ರೆಸ್‌ನ ಹುಚ್ಚಾಟಕ್ಕೆ ವಿದ್ಯಾರ್ಥಿಗಳ ಭವಿಷ್ಯ ಕರಾಳ-ಬಿಜೆಪಿ

Update: 2016-04-02 18:09 IST

ಕಾರ್ಕಳ : ಜನರ ದೈನಂದಿನ ಬದುಕಿನಲ್ಲಿ ನಿರಂತರ ಚೆಲ್ಲಾಟವಾಡುವ ರಾಜ್ಯ ಕಾಂಗ್ರೆಸ್ ಸರಕಾರ ವಿದ್ಯುತ್ ಸಮಸ್ಯೆ, ಮರಳು ಸಮಸ್ಯೆ, ವಿದ್ಯುತ್ ದರ ಏರಿಕೆ, ಜಿ.ಪಂ ತಾ.ಪಂ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಗೊಂದಲ ಇತ್ಯಾದಿ ಅನೇಕನೇಕ ಎಡವಟ್ಟುಗಳನ್ನು ಮೈಮೇಲೆ ಎಳೆದುಕೊಂಡಿರುವ ಈ ಸರಕಾರ ಒಂದು ಹುಚ್ಚರ ಸಂತೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಕಾರ್ಕಳ ಬಿಜೆಪಿ ಆರೋಪಿಸಿದೆ.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆಯನ್ನು ಕದ್ದು ಮುಚ್ಚಿ ಮಾರಾಟ ಮಾಡುವ ಮೂಲಕ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿಯೇಟು ನೀಡಿದೆ. ಮೊದಲ ಭಾರಿ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಾಗ ಎಚ್ಚೆತ್ತುಕೊಳ್ಳದ ಸರಕಾರ ಮತ್ತೆ ಅದೇ ತಪ್ಪನ್ನು ಮಾಡಿ ಸಾರ್ವತ್ರಿಕ ಪರೀಕ್ಷೆಯನ್ನು ಲಘುವಾಗಿ ಪರಿಗಣಿಸಿದೆ. ಆ ಮೂಲಕ ಯಾವುದೇ ಗೊತ್ತು ಗುರಿ ಇಲ್ಲದ ಸರಕಾರ ಮತ್ತು ಆಯಾ ಇಲಾಖೆಯ ಮಂತ್ರಿಗಳು ನಿಷ್ಪ್ರಯೋಜಕರು ಎಂಬುದನ್ನು ಸಾಬೀತು ಪಡಿಸಿದೆ.

ರಾಜ್ಯದ ಇತಿಹಾಸದಲ್ಲಿ ಶಿಕ್ಷಣ ಇಲಾಖೆಯಲ್ಲಿ ಇಷ್ಟೊಂದು ಬೇಜವಾಬ್ದಾರಿ ಮಂತ್ರಿಗಳು ಮತ್ತು ಅಧಿಕಾರಿಗಳು ಈವರೆಗೆ ಬಂದಿಲ್ಲ. ತಕ್ಷಣ ಸಂಬಂಧ ಪಟ್ಟ ಮಂತ್ರಿಗಳು ರಾಜೀನಾಮೆ ನೀಡಬೇಕು. ಸೂಕ್ತ ಭದ್ರತೆಯೊಂದಿಗೆ ಮುಂದಿನ ಪರೀಕ್ಷೆಯ ಪ್ರಕ್ರಿಯೆ ನಡೆಸಿ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಕುಮಾರ್ ಮತ್ತು ಮಹಾವೀರ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News